ನವದೆಹಲಿ : ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧದ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ.14 ದಿನಗಳ ನೋಟಿಸ್ ನೀಡಿಲ್ಲ ಮತ್ತು ಧನ್ಕರ್ ಅವರ ಹೆಸರನ್ನು ಸರಿಯಾಗಿ ಬರೆಯಲಾಗಿಲ್ಲ ಎಂಬ ಕಾರಣಕ್ಕಾಗಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಉಪಸಭಾಪತಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಡಿಸೆಂಬರ್ 10 ರಂದು ರಾಜ್ಯಸಭೆ ಸ್ಪೀಕರ್ ಜಗದೀಪ್ ಧನ್ಕರ್ ವಿರುದ್ಧ ಪ್ರತಿಪಕ್ಷಗಳ INDIA ಮೈತ್ರಿಕೂಟದ ಸಂಸದರು ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. INDIA ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ, ಎಎಪಿ, ಎಸ್ಪಿ, ಡಿಎಂಕೆ ರಾಷ್ಟ್ರೀಯ ಜನತಾ ದಳದ 50ಕ್ಕೂ ಅಧಿಕ ಸಂಸದರು ಸಹಿ ಹಾಕಿರುವ ಅವಿಶ್ವಾಸ ನಿರ್ಣಯ ಪತ್ರವನ್ನು ರಾಜ್ಯಸಭೆಯ ಕಾರ್ಯದರ್ಶಿಗೆ ನೀಡಲಾಗಿತ್ತು. ಇದೀಗ ಜಗದೀಪ್ ಧನ್ಕರ್ ವಿರುದ್ಧದ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ.
ರಾಜ್ಯಸಭಾ ಸ್ಪೀಕರ್ ಸದನದಲ್ಲಿ ಕಲಾಪದ ವೇಳೆ ಪಕ್ಷಪಾತ ಮಾಡುತ್ತಾರೆ, ಅವರು ತಮ್ಮ ಭಾಷಣಗಳಿಗೆ ಆಗಾಗ್ಗೆ ಅಡ್ಡಿ ಪಡಿಸುತ್ತಿದ್ದಾರೆ, ನಿರ್ಣಾಯಕ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆಗಳಲ್ಲಿ ಆಡಳಿತ ಪಕ್ಷದ ಪರವಾಗಿದ್ದಾರೆ ಎಂದು ವಿಪಕ್ಷಗಳ ಸಂಸದರು ಈ ಮೊದಲು ಆರೋಪಿಸಿದ್ದರು.