ಹೈದ್ರಾಬಾದ್ : ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಈಗಾಗಲೇ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.
ಡಿಸೆಂಬರ್ 4 ರ ರಾತ್ರಿ ದುರಂತ ಘಟನೆ ನಡೆದಿದ್ದು, 35 ವರ್ಷದ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಚಿಕ್ಕಡ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನಿಖೆಯ ಭಾಗವಾಗಿ, ಹೈದರಾಬಾದ್ ಪೊಲೀಸರು ಚಿತ್ರಮಂದಿರದ ಸಹ ಮಾಲೀಕ, ಹಿರಿಯ ವ್ಯವಸ್ಥಾಪಕ ಮತ್ತು ಕೆಳಗಿನ ಬಾಲ್ಕನಿ ಉಸ್ತುವಾರಿ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸುವ ಬಗ್ಗೆ ಈ ಹಿಂದೆ ಘೋಷಿಸಿದ್ದರು.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ, ಅಲ್ಲು ಅರ್ಜುನ್ ಅವರನ್ನು ಉಸ್ಮಾನಿ ಆಸ್ಪತ್ರೆಗೆ ಪೊಲೀಸರು ಕರೆದು ತಂದಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಪೊಲೀಸ್ ವಾಹನ ಹತ್ತಲು ತಂದೆ ಅರವಿಂದ್ ಮುಂದಾದರು. ಅಲ್ಲು ಅರ್ಜುನ್ ವಿರುದ್ಧ ಜಾಮೀನು ರಹಿತ ವಾರಂಟ್ ಕೇಸ್ ದಾಖಲಾಗಿದ್ದು ಈ ಪ್ರಕರಣದಲ್ಲಿ 5 ರಿಂದ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.