ಬೆಂಗಳೂರು : ಅನೇಕ ಜನ ಮಹಿಳೆಯರು ಟ್ವೀಟ್ ಮೂಲಕ ಶಕ್ತಿ ಯೋಜನೆಯ ಕುರಿತು ಮೆಸೇಜ್ ಮಾಡಿದ್ದಾರೆ. ಹಾಗಾಗಿ ಈ ಕುರಿತು ಚಿಂತನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಕ್ತಿಯೋಜನೆ ಮರು ಪರಿಶೀಲನೆ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ಅಂತಹ ಮರುಪರಿಶೀಲನೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಿಸುವುದು ಸರ್ಕಾರದ ಹಂತದಲ್ಲಿ ಇಲ್ಲ. ಶಕ್ತಿ ಯೋಜನೆ ಪರಿಷ್ಕರಿಸುವ ಉದ್ದೇಶ ಹಾಗೂ ಪ್ರಸ್ತಾವನೆ ಇಲ್ಲ. ಕೆಲ ಮಹಿಳೆಯರು ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಆ ಕಾರ್ಯಕ್ರಮದಲ್ಲಿ ನಾನು ಅಲ್ಲಿ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಈ ವಿಚಾರವಾಗಿ ನಿನ್ನೆ ವಿಧಾನಸೌಧದ ಗ್ರ‍್ಯಾಂಡ್ ಮೆಟ್ಟಿಲು ಮೇಲೆ ನಡೆದ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಉದ್ಘಾಟನೆ ವೇಳೆ ಮಾತನಾಡಿದ ಡಿಸಿಎಂ, ಅನೇಕ ಜನರು ನನಗೆ ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ದವಾಗಿದ್ದೇವೆ.ನಮಗೆ ಉಚಿತ ಪ್ರಯಾಣ ಬೇಡ ಎಂದು ಮೆಸೇಜ್ ಹಾಕಿದ್ದಾರೆ. ನಾವು ಟಿಕೆಟ್‌ಗೆ ದುಡ್ಡು ಕೊಡುತ್ತೇವೆ ಆದರೆ ಬಸ್‌ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಅನೇಕರು ನಾವು ಟಿಕೆಟ್ ಹಣ ಕೊಡುವುದಕ್ಕೆ ಸಿದ್ಧ ಎಂದು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳುತ್ತಿದ್ದಾರೆ. ಹೀಗಾಗಿ ನಾವು, ರಾಮಲಿಂಗಾರೆಡ್ಡಿ, ಸರ್ಕಾರದಲ್ಲಿ ಎಲ್ಲಾ ಕೂತು ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು ಇನ್ನೂ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊಡೆತ ಅನುಭವಿಸುತ್ತಿರುವ ಸರ್ಕಾರ, ಇದೀಗ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗುವ ಸುಳಿವು ಕೊಟ್ಟಿದೆ ಎನ್ನಲಾಗಿದೆ.