ಬೆಂಗಳೂರು : ರಾಜ್ಯ ವಿಧಾನಸಭೆಯಲ್ಲಿ ನಿನ್ನೆ ಹನಿಟ್ರ್ಯಾಪ್ ವಿಚಾರ ಭಾರಿ ಸದ್ದು ಗದ್ದಲವನ್ನು ಉಂಟು ಮಾಡಿತು. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಅದೇಶಿಸಿದರು. ಬಳಿಕ ಪರಿಷತ್ ನಲ್ಲೂ ಇದೆ ವಿಚಾರ ಪ್ರಸ್ತಾಪವಾದಾಗ ಸಿಎಂ ಸಿದ್ದರಾಮಯ್ಯ ಇದರ ಹಿಂದೆ ಬಿಜೆಪಿ, ಜೆಡಿಎಸ್, ಕಾಂಗ್ರೆಸನವರು ಯಾರೇ ಇದ್ದರೂ ಸುಮ್ನೆ ಬಿಡಲ್ಲ ಈ ಕುರಿತು ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.
ತಮ್ಮ ವಿರುದ್ಧ ಹನಿಟ್ರ್ಯಾಪ್ ಹನಿಟ್ರ್ಯಾಪ್ ಪ್ರಕರಣ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂಬ ಬಿಜೆಪಿ ಶಾಸಕರ ಆಗ್ರಹಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಡೆದಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸದನದಲ್ಲಿಯೇ ಹೇಳಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. 100ಕ್ಕೆ 100ರಷ್ಟು ಗಹನ ತನಿಖೆ ನಡೆಸಿ ಪ್ರಕರಣವನ್ನು ಭೇದಿಸುತ್ತೇವೆ. ಯಾವ ಪಕ್ಷದವರೇ ಆದರೂ ಅವರನ್ನು ಸುಮ್ಮನೇ ಬಿಡಲ್ಲ ಎಂದು ತಿಳಿಸಿದರು.
ಹನಿಟ್ರ್ಯಾಪ್ ಪ್ರಕರಣದಲ್ಲಿ ನಮ್ಮ ಪಕ್ಷದವರು, ವಿರೋಧ ಪಕ್ಷದವರು ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದನದಲ್ಲಿ ಸಚಿವರೇ ಹೇಳಿಕೆ ನೀಡಿದ ಮೇಲೆ ಸರ್ಕಾರ ಸುಮ್ಮನಿರುವುದಿಲ್ಲ. ಈ ಪ್ರಕರಣ ಕುರಿತು ತನಿಖೆ ನಡೆಸುತ್ತೇವೆ. ವಿರೋಧ ಪಕ್ಷದವರು ನ್ಯಾಯಾಂಗ ತನಿಖೆಯ ಸಲಹೆ ನೀಡಿದ್ದಾರೆ. ಈ ಎಲ್ಲದರ ಕುರಿತು ಗೃಹ ಸಚಿವರು ಸೇರಿದಂತೆ ಹಿರಿಯ ಸಚಿವರೊಂದಿಗೆ ಚರ್ಚಿಸಿ, ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಎಲ್ಲ ಶಾಸಕರು, ಸಚಿವರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಪ್ರಕರಣದ ತನಿಖೆಯಾದರೆ ಎಲ್ಲವೂ ಬಹಿರಂಗವಾಗುತ್ತದೆ ಎಂದು ಹೇಳಿದರು.
ಕೆ.ಎನ್. ರಾಜಣ್ಣ ಅವರು ನಮ್ಮ ಸಂಪುಟದ ಸಚಿವರು, ಪರಿಶಿಷ್ಟ ವರ್ಗದ ನಾಯಕರು. ಅವರು ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಹೇಳಿದ್ದಾರೆ. ಅದಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸದನದಲ್ಲಿ ಉತ್ತರ ನೀಡಿ, ಉನ್ನತ ಮಟ್ಟದ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ರಾಜಣ್ಣ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಆದರೂ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕರ, ಸಚಿವರ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.