ಶ್ರೀನಗರ : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ನಡೆದಿದ್ದ ಉಗ್ರರ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇದೀಗ NIA ತನಿಖೆ ಆರಂಭಿಸಿದ್ದು, ದಾಳಿಯ ಕುರಿತು ತನಿಖೆ ಶುರು ಮಾಡಿರುವ NIA ಗೆ ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ ಪ್ರವಾಸಿಗರಿಗಾಗಿ ರೀಲ್ಸ್ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಹೌದು ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ.
ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು.
ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.