ನವದೆಹಲಿ : ಭಾರತದ ಮೊದಲ ತೃತೀಯ ಲಿಂಗಿ ಪೈಲಟ್ ಆಡಮ್ ಹಿಲರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಬುಧವಾರ ಸ್ಪಷ್ಟಪಡಿಸಿದೆ. ಮಂಗಳಮುಖಿಯರಿಗೆ ಪೈಲಟ್ ಪರವಾನಗಿ ನೀಡಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ. ಅಂದ್ಹಾಗೆ, ವೈದ್ಯಕೀಯ ಕಾರಣಗಳಿಗಾಗಿ ಡಿಜಿಸಿಎ ಹಿಲರಿ ಅವ್ರನ್ನ ಅನರ್ಹಗೊಳಿಸಿತ್ತು.
ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ ಗ್ರೂಪ್ ಕ್ಯಾಪ್ಟನ್ ವೈಎಸ್ ದಹಿಯಾ ಸಹಿ ಮಾಡಿದ ಹೇಳಿಕೆಯನ್ನು ಡಿಜಿಸಿಎ ಬಿಡುಗಡೆ ಮಾಡಿದೆ. ಡಿಜಿಸಿಎ ಎಂದಿಗೂ ಹಿಲರಿಗೆ ವಾಣಿಜ್ಯ ಪೈಲಟ್ ಪರವಾನಗಿಯನ್ನ ನಿರಾಕರಿಸಲಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ತೃತೀಯ ಲಿಂಗಿಗಳು ಪರವಾನಗಿ ಪಡೆಯಲು ಯಾವುದೇ ನಿರ್ಬಂಧವಿಲ್ಲ. ಅವರು 1937ರ ವಾಯುಯಾನ ನಿಯಮಗಳ ಅಡಿಯಲ್ಲಿ ವಯಸ್ಸು, ಶಿಕ್ಷಣ ಮತ್ತು ವೈದ್ಯಕೀಯದಂತಹ ಇತರ ಮಾನದಂಡಗಳನ್ನು ಪೂರೈಸುವುದು ಅಗತ್ಯವಾಗಿದೆ. ಪರವಾನಗಿ ಪಡೆಯಲು ವೈದ್ಯಕೀಯ ಫಿಟ್ ನೆಸ್ ಬಹಳ ಮುಖ್ಯ ಎಂದಿದೆ.
ಹೇಳಿಕೆಯ ಪ್ರಕಾರ, ತೃತೀಯ ಲಿಂಗಿ ವ್ಯಕ್ತಿಗೆ ಸಂಬಂಧಿಸಿದಂತೆ ವೈದ್ಯಕೀಯ ಮೌಲ್ಯಮಾಪನವನ್ನ ಹೊಂದುವುದು ಅಗತ್ಯವಾಗಿದೆ. ಅಲ್ಲದೇ, ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದಿದ್ರೆ, ಹಾರ್ಮೋನ್ ಚಿಕಿತ್ಸೆಯ ಬಳಕೆಯು ಅನರ್ಹತೆಯಲ್ಲ. ಡಿಜಿಸಿಎ ಪ್ರಕಾರ, ಹಿಲರಿ ಪ್ರಕರಣದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ವಿಶ್ವದರ್ಜೆಯ ಮಾರ್ಗಸೂಚಿಗಳನ್ನ ಅನುಸರಿಸಲಾಗಿದೆ.