ನವದೆಹಲಿ : ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನ ದೆಹಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ನನ್ನ ಬೇಡಿಕೆಯನ್ನು ತಿರಸ್ಕರಿಸಿ ಸುಪ್ರೀಂಕೋರ್ಟ್ ಕಟು ಟೀಕೆ ಮಾಡಿತ್ತು. ಆದ್ರೆ, ಈಗ ಮತ್ತೆ ಸುಪ್ರೀಂ ಮೊರೆಯೋದ ನೂಪುರ್, “ನನ್ನ ಜೀವಕ್ಕೆ ಇನ್ನಷ್ಟು ಅಪಾಯ ಹೆಚ್ಚಾಗಿದೆ. ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ” ಎಂದಿದ್ದಾರೆ.
ನೂಪುರ್ ಶರ್ಮಾ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದರು, ನಂತರ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಇದಾದ ಬಳಿಕ ಬಿಜೆಪಿ ಅವರನ್ನ ಅಮಾನತು ಮಾಡಿತ್ತು. ಪ್ರವಾದಿ ಮೊಹಮ್ಮದ್ ಹೇಳಿಕೆಗಾಗಿ ಹಲವು ರಾಜ್ಯಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಕೋಲ್ಕತ್ತಾ ಪೊಲೀಸರು ನೂಪುರ್ಗೆ ಹಲವು ಬಾರಿ ಸಮನ್ಸ್ ಕೂಡ ನೀಡಿದ್ದಾರೆ. ಇನ್ನು ಆಕೆಯ ವಿರುದ್ಧ ಲುಕೌಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ಇದಕ್ಕೂ ಮೊದಲು, ನೂಪುರ್ ಶರ್ಮಾ, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ನ್ಯಾಯಾಲಯವು ಅವ್ರ ವಿರುದ್ಧ ಕೆಲವು ತೀಕ್ಷ್ಣ ಟೀಕೆಗಳನ್ನ ಮಾಡಿತ್ತು. “ನೂಪುರ್ ಶರ್ಮಾ ನಾಲಿಗೆ ಹರಿಬಿಟ್ಟಿದ್ದರಿಂದ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ನೂಪುರ್ ಶರ್ಮಾ ದೇಶದ ಕ್ಷಮೆಯಾಚಿಸಬೇಕು” ಎಂದಿತ್ತು. ಇನ್ನು ಇದಾದ ಬಳಿಕ ನೂಪುರ್ ತಮ್ಮ ಅರ್ಜಿಯನ್ನ ಹಿಂಪಡೆದಿದ್ದರು.