ನವದೆಹಲಿ: ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ 2022ರ ಎಲ್ಲಾ 16 ತಂಡಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಗುರುವಾರ ಅಧಿಕೃತ ಅಭ್ಯಾಸ ಪಂದ್ಯಗಳನ್ನ ಪ್ರಕಟಿಸಿದೆ. ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನ ಆಡಬೇಕಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20ಐ ಸರಣಿ ಸೆಪ್ಟೆಂಬರ್ 20 ರಿಂದ 25 ರವರೆಗೆ ನಡೆಯಲಿದೆ. ಇದರ ನಂತರ, ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನ ಆಡಬೇಕಾಗಿದೆ. ಟಿ20 ಸರಣಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4 ರವರೆಗೆ ಮತ್ತು ಏಕದಿನ ಸರಣಿ ಅಕ್ಟೋಬರ್ 6 ರಿಂದ ಅಕ್ಟೋಬರ್ 11 ರವರೆಗೆ ನಡೆಯಲಿದೆ.
ಅಕ್ಟೋಬರ್ 17 ಮತ್ತು 19 ರಂದು ಬ್ರಿಸ್ಬೇನ್ನ ಗಬ್ಬಾದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನ ಆಡಲಿದೆ. ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ನಮೀಬಿಯಾ ತಂಡವನ್ನ ಗೀಲಾಂಗ್ನ ಕಾರ್ಡಿನಿಯಾ ಪಾರ್ಕ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಭಾರತದ ಮೊದಲ ಪಂದ್ಯವು ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ನಡೆಯಲಿದೆ.
ಮೊದಲ ಅಭ್ಯಾಸ ಪಂದ್ಯದಲ್ಲಿ, ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಅಕ್ಟೋಬರ್ 10 ರಂದು ಜಂಕ್ಷನ್ ಓವಲ್ನಲ್ಲಿ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ವಿರುದ್ಧ ಆಡಲಿದೆ. ಆತಿಥೇಯ ಆಸ್ಟ್ರೇಲಿಯಾ ಅಕ್ಟೋಬರ್ 17ರಂದು ಗಬ್ಬಾದಲ್ಲಿ ಭಾರತದ ವಿರುದ್ಧ ತನ್ನ ಏಕೈಕ ಅಧಿಕೃತ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಭ್ಯಾಸ ಪಂದ್ಯಗಳು ಪ್ರೇಕ್ಷಕರಿಗೆ ಮುಕ್ತವಾಗಿರುವುದಿಲ್ಲ. ಅಕ್ಟೋಬರ್ 17 ಮತ್ತು 19 ರಂದು ಗಬ್ಬಾದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಐಸಿಸಿಯ ಜಾಗತಿಕ ಪ್ರಸಾರ ಪಾಲುದಾರ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮಾಡಲಿದೆ.