ಗೋವಾ : ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಟಿಕ್ಟಾಕ್ ತಾರೆ ಸೋನಾಲಿ ಫೋಗಟ್ ಅವ್ರದ್ದು ಸಹಜ ಸಾವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಸೋನಾಲಿ ಸಹೋದರಿ ಮಾಧ್ಯಮಗಳ ಮುಂದೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಸೋನಾಲಿ ಫೋಗಟ್ ಅವ್ರ ಹಿರಿಯ ಸಹೋದರಿ ರಾಮನ್ ಫೋಗಟ್, “ರಾತ್ರಿ 11 ಗಂಟೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದು, ಆಹಾರದ ಬಗ್ಗೆ ದೂರು ನೀಡಿದರು. ಸೋನಾಲಿ ತಾಯಿಯೊಂದಿಗೆ ಫೋನ್ನಲ್ಲಿ ಮಾತುಕತೆ ನಡೆಸಿದ್ದು, ಊಟ ಮಾಡಿ ಸಂಕಟವಾಗ್ತಿದೆ ಎಂದು ನಮ್ಮ ತಾಯಿಗೆ ಹೇಳಿದ್ದರು. ಇನ್ನು ಬೆಳಿಗ್ಗೆ ಡಾಕ್ಟರ ಬಳಿಗೆ ಹೋಗೋಣ ಎಂದು ಹೇಳಿದ್ದೆವು. ಆದ್ರೆ, ಬೆಳಿಗ್ಗೆ ಅವರ ಸಾವಿನ ಸುದ್ದಿ ಬಂತು. ಊಟದಲ್ಲಿಯೇ ಏನೋ ಆಗಿದೆ” ಎಂದಿದ್ದಾರೆ.
2016ರಲ್ಲಿ ಸೋನಾಲಿ ಪತಿ ನಿಧನ
ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಟಿಕ್ಟಾಕ್ ತಾರೆ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೋನಾಲಿ ಫೋಗಟ್ ಅವರಿಗೆ ಕೇವಲ 41 ವರ್ಷ ವಯಸ್ಸಾಗಿತ್ತು ಮತ್ತು ಸೋಮವಾರ ರಾತ್ರಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು. ಸೋನಾಲಿ ಫೋಗಟ್ ಅವರು ಫತೇಹಾಬಾದ್ನ ಭೂತಾನ್ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಹತ್ತನೇ ತರಗತಿಯವರೆಗೆ ಓದಿದ ನಂತರವೇ ಸೋನಾಲಿ ತನ್ನ ಸಹೋದರಿಯ ಸೋದರ ಮಾವ ಸಂಜಯ್ನನ್ನು ಮದುವೆಯಾಗಿದ್ದಳು. 2016 ರಲ್ಲಿ, ಸಂಜಯ್ ಅವರು ಹರಿಯಾಣದ ತಮ್ಮ ಫಾರ್ಮ್ಹೌಸ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಗಂಡನ ಮರಣದ ನಂತರ ತನಗೆ ಮಾನಸಿಕವಾಗಿ ಸಾಕಷ್ಟು ಹಿಂಸೆಯಾಗುತ್ತಿದೆ ಎಂದು ಹೇಳಿದ್ದಾಳೆ. ಸೋನಾಲಿಗೆ ಒಬ್ಬ ಮಗಳಿದ್ದಾಳೆ, ಆಕೆಯ ಹೆಸರು ಯಶೋಧರ ಫೋಗಟ್.
ತನ್ನ ಟಿಕ್ಟಾಕ್ ವೀಡಿಯೊಗಳ ಮೂಲಕ ಪ್ರಸಿದ್ಧರಾದ ನಂತರ, ಸೋನಾಲಿ ಫೋಗಟ್ 2019 ರಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಗೆ ಮೊದಲು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು. ಇದರ ನಂತರ, ಹರಿಯಾಣ ಚುನಾವಣೆಯಲ್ಲಿ ಆದಂಪುರ ವಿಧಾನಸಭಾ ಕ್ಷೇತ್ರದಿಂದ ಕುಲದೀಪ್ ಬಿಷ್ಣೋಯ್ ವಿರುದ್ಧ ಪಕ್ಷವು ಅವರಿಗೆ ಟಿಕೆಟ್ ನೀಡಿತು, ಆದರೆ ಅವರು ಸೋಲನ್ನು ಎದುರಿಸಬೇಕಾಯಿತು. ಸೋನಾಲಿ ಫೋಗಟ್ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಮತ್ತು ಹಿಸಾರ್ ವಲಯ ಕಲಾ ಪರಿಷತ್ತಿನ ನಿರ್ದೇಶಕಿಯೂ ಆಗಿದ್ದರು.