ನದವೆಹಲಿ : ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮುಂಬೈನಲ್ಲಿ ಭದ್ರತೆಯನ್ನ ಮುಂದುವರಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನ ಒಳಗೊಂಡ ಪೀಠವು ಪಿಐಎಲ್ ಬಗ್ಗೆ ತ್ರಿಪುರಾ ಹೈಕೋರ್ಟ್ನ ನಿರ್ದೇಶನವನ್ನ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಅನುಮತಿ ನೀಡಿತು.
ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ತ್ರಿಪುರಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ರಜಾಕಾಲದ ನ್ಯಾಯಪೀಠ ಜೂನ್ 29ರಂದು ತಡೆ ನೀಡಿತ್ತು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತ್ರಿಪುರಾದ ಪಿಐಎಲ್ ಅರ್ಜಿದಾರರಿಗೆ (ಬಿಕಾಶ್ ಸಹಾ) ಮುಂಬೈನಲ್ಲಿ ಒದಗಿಸಲಾದ ವ್ಯಕ್ತಿಗಳ ಭದ್ರತೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಅಂದ್ಹಾಗೆ, ಬಿಕಾಶ್ ಸಹಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ತ್ರಿಪುರಾ ಹೈಕೋರ್ಟ್ ಮೇ 31 ಮತ್ತು ಜೂನ್ 21ರಂದು ಎರಡು ಮಧ್ಯಂತರ ಆದೇಶಗಳನ್ನ ಹೊರಡಿಸಿತ್ತು ಮತ್ತು ಅಂಬಾನಿ, ಅವರ ಪತ್ನಿ ಮತ್ತು ಮಕ್ಕಳ ಬೆದರಿಕೆ ಗ್ರಹಿಕೆ ಮತ್ತು ಮೌಲ್ಯಮಾಪನ ವರದಿಗೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯ (MHA) ನಿರ್ವಹಿಸುವ ಮೂಲ ಕಡತವನ್ನು ಇರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.