ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಇದಕ್ಕೂ ಮೊದಲು ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನವಾಗಿ ಉದ್ಘಾಟನೆಗೊಂಡ ಟರ್ಮಿನಲ್ 2ನ್ನು ಪರಿಶೀಲಿಸಿದರು. ಅಂದ ಹಾಗೇ ಟರ್ಮಿನಲ್ ಅನ್ನು ಸುಮಾರು 5000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಇದೇ ವೇಳೆ ರಾಜ್ಯದ ಬಹುನಿರೀಕ್ಷಿತ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು. ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಈ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ ಒಟ್ಟು ವೆಚ್ಚ 20,000 ರೂ ಇದ್ದು, ಇದರಲ್ಲಿ ಸರ್ಕಾರ 5000ರೂ ಸಹಾಯಧನ ನೀಡುತ್ತಿದೆ. ಪ್ರವಾಸದಲ್ಲಿ ಆಹಾರ, ವಸತಿ ಹಾಗೂ ಇನ್ನಿತರ ಸೌಕರ್ಯಗಳನ್ನು ಯಾತ್ರಿಕರಿಗೆ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಕಾನೂನು ಮತ್ತು ಸಂಸದೀಯ, ಗಣಿ ಮತ್ತು ಕಲ್ಲಿದ್ದಿಲು ಸಚಿವ ಪ್ರಹ್ಲಾದ್ ಜೋಷಿ, ರಾಜ್ಯದ ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಹಾಗೂ ಇತರ ಗಣ್ಯರು ಹಾಜರಿದ್ದರು.
kempegowda statue inauguration