ನವದೆಹಲಿ: ತಾಂತ್ರಿಕ ದೋಷದಿಂದಾಗಿ ರದ್ದಾದ CUET-UG ಪರೀಕ್ಷೆಗಳನ್ನ ಆಗಸ್ಟ್ 24 ಮತ್ತು 28 ರಂದು ನಡೆಸಲಾಗುವುದು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಜಂಟಿ ಪ್ರವೇಶ ಪರೀಕ್ಷೆ-ಪದವೀಧರ (CUET-UG ) ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಹಿತಿ ನೀಡಿದೆ. ಪರೀಕ್ಷೆಗಳನ್ನ ರದ್ದುಗೊಳಿಸಿದ ಅಭ್ಯರ್ಥಿಗಳಿಗೆ ಹೊಸ ಪ್ರವೇಶ ಪತ್ರವನ್ನ ನೀಡಲಾಗುವುದು. ಆಗಸ್ಟ್ 12 ರಿಂದ 14 ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಎನ್ಟಿಎ ಈ ಹಿಂದೆ ಘೋಷಿಸಿತ್ತು. ಆದ್ರೆ, ಅನೇಕ ಅಭ್ಯರ್ಥಿಗಳು ಈ ಸಮಯದಲ್ಲಿ ಅನೇಕ ಹಬ್ಬಗಳು ಇರುವುದ್ರಿಂದ ಈ ದಿನಾಂಕಗಳಲ್ಲಿ ಪರೀಕ್ಷೆಯನ್ನ ನಡೆಸದಂತೆ ವಿನಂತಿಸಿದ್ದರು. ಈ ಕಾರಣದಿಂದಾಗಿ, ಆಗಸ್ಟ್ 24 ಮತ್ತು 28 ರ ನಡುವೆ ಪರೀಕ್ಷೆ ನಡೆಸಲು ಎನ್ಟಿಎ ನಿರ್ಧರಿಸಿದೆ.
ಶಿಷ್ಟಾಚಾರವನ್ನ ಅನುಸರಿಸದ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ತಾಂತ್ರಿಕ ದೋಷಗಳಿಂದಾಗಿ ಹಲವಾರು ಕೇಂದ್ರಗಳನ್ನ ರದ್ದುಗೊಳಿಸಿದ ಎರಡು ದಿನಗಳ ನಂತ್ರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆಗಸ್ಟ್ 6, ಶನಿವಾರದಂದು ನಿಯಮಗಳನ್ನ ಪಾಲಿಸದ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಕೆಲವು ಸಿಯುಇಟಿ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಉಂಟಾದ ಅನಾನುಕೂಲತೆಯನ್ನ ಗಮನದಲ್ಲಿಟ್ಟುಕೊಂಡು, ಎನ್ಟಿಎ ಶುಕ್ರವಾರ ಇಡೀ ಪರಿಸ್ಥಿತಿಯನ್ನ ಪರಿಶೀಲಿಸಿತು ಮತ್ತು ಕೆಲವು ಕೇಂದ್ರಗಳು ನಿಗದಿಪಡಿಸಿದ ಪ್ರೋಟೋಕಾಲ್ ಅನುಸರಿಸಲು ವಿಫಲವಾಗಿವೆ ಎಂದು ಏಜೆನ್ಸಿ ಕಂಡುಕೊಂಡಿದೆ ಎಂದು ಎನ್ಟಿಎ ಹೇಳಿದೆ. ನಿರ್ಲಕ್ಷ್ಯದ ಯಾವುದೇ ಘಟನೆಯನ್ನ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಭವಿಷ್ಯದಲ್ಲಿ ಸುಗಮ ಪರೀಕ್ಷೆಯನ್ನ ಖಚಿತಪಡಿಸಿಕೊಳ್ಳಲು ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏಜೆನ್ಸಿ ಹೇಳಿದೆ.