ಬೆಂಗಳೂರು : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಹೊತ್ತಲ್ಲೇ ಮಹಾರಾಷ್ಟ್ರ ಸಚಿವರು ನಾಳೆ ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಶಾಂತಿ ಕದಡಲು ಬಿಡುವುದಿಲ್ಲ. ಭಾವನಾತ್ಮಕವಾಗಿ ಕೆರಳಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದು ಏನು ಮಾಡಬಹುದು ಎಂದು ನೋಡೋಣ. ಬೆಳಗಾವಿ 2 ರಾಜ್ಯಗಳ ಯುದ್ಧರಂಗ ಅಲ್ಲ. ನೆಲ, ಜಲ ಕಾಪಾಡುವ ದೃಷ್ಟಿಯಿಂದ ನಾವು ಕ್ರಮಕ್ಕೆ ಮುಂದಾಗಿದ್ದೇವೆ. ಮಹಾರಾಷ್ಟ್ರ ಸಚಿವರು ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಮತ್ತು ಗಡಿ ವಿವಾದದ ಮಹಾರಾಷ್ಟ್ರ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಧೈರ್ಯಶೀಲ್ ಮಾನೆ ಅವರು ಡಿಸೆಂಬರ್ 6 ರಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರನ್ನು ಭೇಟಿಯಾಗಲಿದ್ದಾರೆ.