ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿ ಮತ್ತೆ ಹೈಡ್ರಾಮ ಶುರುವಾಗಿದ್ದು, ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರುವ ಅರಳಿ ಮರದ ಬಳಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಇನ್ನು ಈ ವೇಳೆ ಪೊಲೀಸರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ತಿರುಗಿಬಿದ್ದಿದ್ದು, ಠಾಣೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂದ್ಹಾಗೆ, 3 ವರ್ಷದಿಂದ ಈದ್ಗಾ ಮೈದಾನದ ಬಳಿಯಿರುವ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಗಣೇಶ ಪ್ರತಿಷ್ಠಾಪಿಸುತ್ತಿದ್ದರು. ಆದ್ರೆ, ಈ ಬಾರಿ ಮಹದೇಶ್ವರ ದೇವಸ್ಥಾನದ ಮುಂಭಾಗ ಅಂದ್ರೆ ಮೈದಾನಕ್ಕೆ ಹೊಂದಿಕೊಂಡಿರುವ ಅರಳಿ ಮರದ ಬಳಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಆದ್ರೆ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆ ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಪೊಲೀಸರು ಮನವರಿಕೆ ಮಾಡಿದ್ದು, ಅಯ್ಯಪ್ಪ ದೇಗುಲದ ಬಳಿ ಗಣೇಶ ಪ್ರತಿಷ್ಠಾಪನೆಗೆ ಸೂಚಿಸಿದ್ದಾರೆ.
ಇನ್ನು ಪಾದರಾಯಪುರ, ಜೆಜೆಆರ್ ನಗರ, ಗೋರಿಪಾಳ್ಯದಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಸಲು ಅವಕಾಶ ನೀಡುವಂತೆ ಹಿಂದೂ ಕಾರ್ಯಕರ್ತರ ಮನವಿ ಮಾಡಿದ್ದರು. ಆದ್ರೆ, ಗಣೇಶ ಪ್ರತಿಷ್ಠಾಪನೆ, ಮೆರವಣಿಗೆಗೆ ಚಾಮರಾಜಪೇಟೆ ಪೊಲೀಸರು ಒಪ್ಪಿಲ್ಲ.