ನವದೆಹಲಿ : ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಲು ಹಾದಿ ಸುಗಮವಾಗಿದೆ. ಅವರ ನಾಮಪತ್ರದ ವಿರುದ್ಧ ಎತ್ತಲಾದ ಆಕ್ಷೇಪಣೆಯನ್ನು ಬಿಸಿಸಿಐ ರಿಟರ್ನಿಂಗ್ ಅಧಿಕಾರಿ ಎ.ಕೆ.ಜೋತಿ ತಿರಸ್ಕರಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಮಾತ್ರ ಅಭ್ಯರ್ಥಿಯಾಗಿದ್ದು, ಬಿಸಿಸಿಐನ ನೂತನ ಅಧ್ಯಕ್ಷರನ್ನ ಅಕ್ಟೋಬರ್ 18ರಂದು ಅಧಿಕೃತವಾಗಿ ಘೋಷಿಸಲಾಗುವುದು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರಾದ ಎ.ಎಂ.ರಾಮಮೂರ್ತಿ ಮತ್ತು ಎನ್.ಶ್ರೀಪತಿ ಅವರು ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಗಳನ್ನು ನಾಮನಿರ್ದೇಶನ ಮಾಡಲು / ನೇಮಕ ಮಾಡಲು ಅಸೋಸಿಯೇಷನ್ನ ವ್ಯವಸ್ಥಾಪಕ ಸಮಿತಿಯ ಅರ್ಹತೆಯನ್ನ ಪ್ರಶ್ನಿಸಿದ್ದರು. ವ್ಯವಸ್ಥಾಪನಾ ಸಮಿತಿಯ ಅವಧಿ ಅಕ್ಟೋಬರ್ 3 ರಂದು ಕೊನೆಗೊಂಡಿದ್ದರಿಂದ, ಬಿನ್ನಿ ಅವರ ನಾಮನಿರ್ದೇಶನವು ಕಾನೂನುಬದ್ಧವಾಗಿರಲಿಲ್ಲ ಎಂಬ ಅಂಶವನ್ನ ಆಧರಿಸಿ ಅವರ ಆಕ್ಷೇಪಣೆ ಇತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆ ಮತ್ತು ಎಜಿಎಂ ನಡೆಸಲು ವ್ಯವಸ್ಥಾಪನಾ ಸಮಿತಿ ವಿಫಲವಾಗಿದೆ ಎಂಬ ವಿಷಯವನ್ನೂ ಎತ್ತಲಾಯಿತು.