ಮೈಸೂರು : ರಾಜ್ಯ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಹಿಂಸೆ ಮಾಡಿ ಬಲವಂತವಾಗಿ ಕಮಿಷನ್ ಪಡೆಯಲಾಗುತ್ತಿದೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆಯಲ್ಲಿ ಮೊದಲಿನಿಂದಲೂ 3 ರಿಂದ 4 ರಷ್ಟು ಕಮಿಷನ್ ಇತ್ತು. ಉಪನೋಂದಣಿ ಕಚೇರಿಯಲ್ಲಿ ಚಂದಾ ಎತ್ತುವುದೂ ಇದೆ. ಇದು ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ಹಿಂದೆ ಜನ ಸಂತೋಷವಾಗಿ ಕೊಟ್ಟು ಹೋಗುತ್ತಿದ್ದರು. ಈಗ ಹಿಂಸೆ ಮಾಡಿ ಕಮಿಷನ್ ಕೀಳುವ ಕೆಲಸ ಆಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ 2008 ರಲ್ಲಿ ಅಧಿಕಾರ ಬಂತೋ ಆಗಿನಿಂದಲೇ ಕಮಿಷನ್ ದಂಧೆ ಶುರುವಾಗಿದೆ. ಆಪರೇಷನ್ ಕಮಲದಿಂದ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ 45 ವರ್ಷ ರಾಜ್ಯ ಆಳಿದೆ. ದೇವೇಗೌಡರ ಆಡಳಿತದಲ್ಲಿ ಕಮಿಷನ್ ಇರಲಿಲ್ಲ. ನಾನು ಸಿಎಂ ಆಗಿದ್ದ ವೇಳೆಯೂ ಕಮಿಷನ್ ದಂಧೆ ಇತ್ತು. ಬಿಜೆಪಿ ಸರ್ಕಾರದಲ್ಲಿ ಶಾಸಕರ ಹಂತದಲ್ಲೇ ಕಮಿಷನ್ ದಂಧೆ ಇದೆ. ಎಲ್ಲಾ ಪಕ್ಷದ ಶಾಸಕರು ಗಣಿಗಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರದಿಂದಲೇ ಮರಳು ದಂಧೆ ಶುರುವಾಗಿದೆ ಎಂದರು.