ಕೆಎನ್ಎನ್ಡಿಜಿಟಲ್ ಡೆಸ್ಕ್ : ‘ಕಾಳಿ’ ಸಾಕ್ಷ್ಯಚಿತ್ರದ ಪೋಸ್ಟರ್ ವಿವಾದಕ್ಕೆ ಗುರಿಯಾಗಿದ್ದು, ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. “ಅತ್ಯಂತ ಆಕ್ಷೇಪಾರ್ಹ” ಪೋಸ್ಟರ್ ಮೂಲಕ ಧಾರ್ಮಿಕ ಭಾವನೆಗಳನ್ನ ನೋಯಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್, ಜುಲೈ 2 ರಂದು ಲೀನಾ ಹಂಚಿಕೊಂಡ ವಿವಾದಾತ್ಮಕ ಪೋಸ್ಟರ್ಗೆ ಸಂಬಂಧಿಸಿದಂತೆ ಅವ್ರು ವಿರುದ್ಧ ದೂರು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಸಾಕ್ಷ್ಯಚಿತ್ರದ ಆಕ್ಷೇಪಾರ್ಹ ಫೋಟೋ ಮತ್ತು ಕ್ಲಿಪ್ ನಿಷೇಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಸಿಗರೇಟು ಸೇದುತ್ತಿರುವ ಪೋಸ್ಟರ್ ಹಿಂದೂ ಸಮುದಾಯದ ಭಾವನೆಗಳು ಮತ್ತು ನಂಬಿಕೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಪೋಸ್ಟರ್ ಬಗ್ಗೆ ಟ್ವೀಟ್ ಮಾಡಿರುವ ವಕೀಲರು, “ಕಾಳಿ ಮಾತೆಯ ಕುರಿತ ಆಕ್ಷೇಪಾರ್ಹ ಕ್ಲಿಪ್ ಮತ್ತು ಫೋಟೋಗಾಗಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಡಿಸಿಪಿಗೆ ದೂರು ದಾಖಲಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಈ ಕಾನೂನುಬಾಹಿರ ಕೃತ್ಯವನ್ನ ಮಾಡಿದ್ದಕ್ಕಾಗಿ ಲೀನಾ ಮಣಿಮೇಕಲೈ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.