ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಅಪಘಾತ ಇದಾಗಿದೆ. ರಜೌರಿ ಮತ್ತು ಪೂಂಚ್ ಎಂಬ ಅವಳಿ ಜಿಲ್ಲೆಗಳಲ್ಲಿ ನಡೆದ ಎರಡನೇ ರಸ್ತೆ ಅಪಘಾತದಲ್ಲಿ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನು ನಿನ್ನೆ ಬಸ್ಸೊಂದು ಕಂದಕಕ್ಕೆ ಬಿದ್ದು 12 ಮಂದಿ ಮೃತಪಟ್ಟಿದ್ದರು. ಇಂದು, ರಜೌರಿಯಲ್ಲಿ ಬಸ್ಸೊಂದು ಪ್ರಪಾತಕ್ಕೆ ಬಿದ್ದಿದೆ. ಆರು ಜನರು ಸಾವನ್ನಪ್ಪಿದ್ದು, 25 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತ ವರದಿಯಾದ ತಕ್ಷಣ ಸೇನೆ, ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಘಟನಾ ಸ್ಥಳದಿಂದ ಈವರೆಗೆ ಐದು ಶವಗಳನ್ನ ಹೊರತೆಗೆಯಲಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಜಮ್ಮುವಿನಿಂದ ಪೂಂಚ್ ಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ರಾಜೌರಿ ಜಿಲ್ಲೆಯ ಮಂಜಕೋಟೆ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ.
ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಸೇನೆ, ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನ ಮುಂದುವರಿಸಿದ್ದಾರೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಎರಡು ದಿನಗಳಲ್ಲಿ ಈ ಎರಡು ರಸ್ತೆ ಅಪಘಾತಗಳಲ್ಲಿ ಇದುವರೆಗೆ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಗಾಯಗೊಂಡವರನ್ನು ಮಂಜಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಮಂಜಕೋಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ರಜೌರಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಜೌರಿ ರಸ್ತೆ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.