ಅಬುಜಾ : ನೈಋತ್ಯ ನೈಜೀರಿಯಾದಲ್ಲಿ ಬಸ್ಸೊಂದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಓಯೋ ರಾಜ್ಯದ ಇಬಾರಪಾ ಪ್ರದೇಶದ ಲ್ಯಾನ್ಲೆಟ್ ಎಂಬಲ್ಲಿ ಶನಿವಾರ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮತ್ತು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
“ಇದು ಮಾರಣಾಂತಿಕ ಅಪಘಾತ” ಎಂದು ಇಬಾರಪಾ ಜಿಲ್ಲಾ ಅಧ್ಯಕ್ಷ ಗಬೆಂಗಾ ಒಬಾಲೊವೊ ಎಎಫ್ಪಿಗೆ ತಿಳಿಸಿದ್ದಾರೆ. ನಾವು ಸಂಪೂರ್ಣವಾಗಿ ಸುಟ್ಟು ಕರಕಲಾದ 20 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದ್ದೇವೆ” ಎಂದು ಒಬಾಲೊವೊ ಹೇಳಿದರು.
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ನಂತ್ರ ಬಸ್ʼಗೆ ಬೆಂಕಿ ತಗುಲಿದೆ ಎಂದು ಅವರು ಹೇಳಿದರು. ಅಪಘಾತದಲ್ಲಿ ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಇಬ್ಬರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಪಘಾತವನ್ನು ದೃಢಪಡಿಸಿದ್ದಾರೆ ಮತ್ತು “ಅಪಘಾತದಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಹೇಳಿದರು, ಆದ್ರೆ, ಮೃತಪಟ್ಟವರ ಬಗ್ಗೆ ಹೆಚ್ಚಿನ ವಿವರಗಳನ್ನ ನೀಡಲಿಲ್ಲ.
ಅಂದ್ಹಾಗೆ, ನೈಜೀರಿಯಾದ ಕಳಪೆ ನಿರ್ವಹಣೆಯ ರಸ್ತೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಈ ವರ್ಷದ ಜುಲೈ ಆರಂಭದಲ್ಲಿ, ವಾಯುವ್ಯ ನೈಜೀರಿಯಾದ ಕಡುನಾ ರಾಜ್ಯದ ಹೆದ್ದಾರಿಯಲ್ಲಿ ಮೂರು ವಾಹನಗಳು ಡಿಕ್ಕಿ ಹೊಡೆದು 30 ಜನರು ಸಾವನ್ನಪ್ಪಿದ್ದರು.