ನವದೆಹಲಿ : 500 ಮತ್ತು 1000 ರೂ.ಗಳ ನೋಟುಗಳನ್ನ ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ನಾಳೆ ನಡೆಸಲಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನಾಳೆ ವಿಚಾರಣೆ ನಡೆಸಲಿದೆ.
Supreme Court constitution bench will hear tomorrow pleas challenging the Centre's decision to demonetize currency notes of Rs 500 & Rs 1000. Five Judge bench headed by Justice Abdul Nazeer will hear the matter tomorrow
— ANI (@ANI) September 27, 2022
2016ರಲ್ಲಿ ನೋಟು ಅಮಾನ್ಯೀಕರಣದ ಆರು ವರ್ಷಗಳ ನಂತರ, ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು ಈಗ ಅದರ ಸಿಂಧುತ್ವವನ್ನ ಆಲಿಸಲಿದೆ. ಇದಕ್ಕಾಗಿ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರ ಅಧ್ಯಕ್ಷತೆಯಲ್ಲಿ 5 ನ್ಯಾಯಾಧೀಶರ ಪೀಠ ರಚಿಸಲಾಗಿದೆ. ನ್ಯಾಯಪೀಠವು ಈ ವಿಷಯವನ್ನು ವಿವರವಾದ ವಿಚಾರಣೆಗಾಗಿ ನಾಳೆ ಅಂದರೆ ಸೆಪ್ಟೆಂಬರ್ 28ರಂದು ನಿಗದಿಪಡಿದ್ದಾರೆ. ಡಿಸೆಂಬರ್ 16, 2016 ರಂದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಯಿತು, ಆದರೆ ನ್ಯಾಯಪೀಠವನ್ನು ಇನ್ನೂ ರಚಿಸಲಾಗಿಲ್ಲ.
ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರು ನ್ಯಾಯಪೀಠದಲ್ಲಿ ಇದ್ದಾರೆ. 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆದಿತ್ತು. ಇದರ ವಿರುದ್ಧ ಹಲವಾರು ಅರ್ಜಿಗಳನ್ನು ಸಲ್ಲಿಸಲಾಯಿತು. 2016ರ ನವೆಂಬರ್ 15ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ‘ಈ ಯೋಜನೆಯ ಹಿಂದಿರುವ ಸರ್ಕಾರದ ಉದ್ದೇಶ ಶ್ಲಾಘನಾರ್ಹ. ನಾವು ಆರ್ಥಿಕ ನೀತಿಯಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ಆದರೆ ಜನರಿಗೆ ಉಂಟಾಗುವ ಅನಾನುಕೂಲತೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಈ ಬಗ್ಗೆ ಸರ್ಕಾರ ಅಫಿಡವಿಟ್ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.