ಹೈದ್ರಬಾದ್: ಇಲ್ಲಿನ ಸುಂಡಾದಲ್ಲಿ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಸುಂಡಾದಲ್ಲಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗುಂಟೂರು ಎಸ್ಪಿ ಆರಿಫ್ ಹಫೀಜ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದಕ್ಕೂ ಮುನ್ನ ನೆಲ್ಲೂರು ಜಿಲ್ಲೆಯ ಕಂದಕೂರ್ ಪಟ್ಟಣದಲ್ಲಿ ಟಿಡಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು. ಪ್ರತಿಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ರೋಡ್ ಶೋ ಉದ್ದೇಶಿಸಿ ಮಾತನಾಡುತ್ತಿದ್ದಾಗ ಒಳಚರಂಡಿ ಕಾಲುವೆಗೆ ಬಿದ್ದು ಇಬ್ಬರು ಮಹಿಳೆಯರು ಸೇರಿದಂತೆ ಇತರ ಎಂಟು ಮಂದಿ ಗಾಯಗೊಂಡಿದ್ದರು. ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು ಮತ್ತು ಸಭೆಯಲ್ಲಿ ಸಾರ್ವಜನಿಕರಲ್ಲಿ ಸ್ವಲ್ಪ ನೂಕುನುಗ್ಗಲು ಉಂಟಾಯಿತು, ಇದು ಕಾಲುವೆಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು ಎನ್ನಲಾಗಿದೆ. ಗಾಯಗೊಂಡವರಲ್ಲಿ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಭೆಯನ್ನು ತಕ್ಷಣ ರದ್ದುಗೊಳಿಸಿದ ನಾಯ್ಡು, ಮೃತರ ಕುಟುಂಬಕ್ಕೆ ₹ 10 ಲಕ್ಷ ಘೋಷಿಸಿದ್ದಾರೆ.