ನವದೆಹಲಿ : ಪ್ಯಾಕ್ ಮಾಡಿದ 10 ರೂಪಾಯಿ ಮೊಸರಿನ ಬೆಲೆ 15 ರೂಪಾಯಿಗೆ ಏರುತ್ತೆ ಅಂತಾ ಯಾರೂ ನಿರೀಕ್ಷಿಸಿರೋದಿಲ್ಲ.ಆದ್ರೆ, ಬೆಲೆ ಏರಿಕೆಯನ್ನ ಈಗಾಗಲೇ ನಿರ್ಧರಿಸಲಾಗಿದ್ದು, 10 ರೂಪಾಯಿ ಮೌಲ್ಯದ ವಸ್ತು ನೇರವಾಗಿ 15 ರೂಪಾಯಿ ಆಗಿದೆ.
ವಾಸ್ತವವಾಗಿ, ಕಳೆದ ತಿಂಗಳು ಮೊದಲ ಬಾರಿಗೆ, ಕೇಂದ್ರ ಸರ್ಕಾರವು ಹಾಲಿನಿಂದ ತಯಾರಿಸಿದ ಪ್ಯಾಕ್ ಉತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಯಲ್ಲಿ ಸೇರಿಸಿದೆ. ಇದು ಜುಲೈ 18 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಪ್ಯಾಕ್ ಮಾಡಲಾದ ಹಾಲಿನ ಉತ್ಪನ್ನಗಳ ಮೇಲೆ ಸರ್ಕಾರವು ಜಿಎಸ್ಟಿಯನ್ನ ಶೇಕಡಾ 5ರ ದರದಲ್ಲಿ ನಿಗದಿಪಡಿಸಿದೆ. ಆದ್ರೆ, ಕಂಪನಿಗಳು ಬೆಲೆಯನ್ನ ಶೇಕಡಾ 50ರಷ್ಟು ಹೆಚ್ಚಿಸುತ್ತಿವೆ.
ದೇಶದ ಎಲ್ಲಾ ಪ್ರಸಿದ್ಧ ಕಂಪನಿಗಳು ಪ್ಯಾಕ್ ಮಾಡಿದ ಮೊಸರನ್ನ ಒದಗಿಸುತ್ತವೆ, ಅವುಗಳಲ್ಲಿ ಒಂದು ಬ್ರಿಟಾನಿಯಾ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 80ಗ್ರಾಂ, 150 ಗ್ರಾಂ ಮತ್ತು 400ಗ್ರಾಂ ಪ್ಯಾಕೇಜ್ಡ್ ಮೊಸರನ್ನ ಮಾರಾಟ ಮಾಡುತ್ತದೆ. ಇದುವರೆಗೆ ಮಾರುಕಟ್ಟೆಯಲ್ಲಿ 80 ಗ್ರಾಂ ಪ್ಯಾಕ್ ಮಾಡಿದ ಮೊಸರು ಬೆಲೆ 10 ರೂ. ಆದರೆ ಇಂದಿನಿಂದ ಅದೇ 80 ಗ್ರಾಂ ಪ್ಯಾಕ್ ಮಾಡಿದ ಬ್ರಿಟಾನಿಯಾ ಮೊಸರು ಮಾರುಕಟ್ಟೆಯಲ್ಲಿ 15 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, ಕಂಪನಿಯು ನೇರವಾಗಿ ಅದರ ಬೆಲೆಯನ್ನ 10 ರಿಂದ 15 ರೂ. ಏರಿಸಿದೆ. ಈ ಮೂಲಕ ಗ್ರಾಹಕರು ಈಗ 10 ರೂಪಾಯಿ ಮೌಲ್ಯದ ಮೊಸರಿಗೆ 5 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ.
ಪ್ಯಾಕೇಜ್ಡ್ ಮೊಸರಿಗೆ ಸರ್ಕಾರ 5% ಜಿಎಸ್ಟಿ ವಿಧಿಸಿದೆ. ಆದ್ರೆ, ಕಂಪನಿಗಳು ಜಿಎಸ್ಟಿಯನ್ನ ಉಲ್ಲೇಖಿಸಿ ಬೆಲೆಗಳನ್ನು ಹುಚ್ಚುಚ್ಚಾಗಿ ಹೆಚ್ಚಿಸುತ್ತಿವೆ. ನಿಯಮಗಳ ಪ್ರಕಾರ ಶೇ.5ರಷ್ಟು ಜಿಎಸ್ಟಿ ಜಾರಿಯಿಂದ 10 ರೂ.ಗಳ ಮೊಸರು ದರ 10.50 ರೂ.ಗೆ ಏರಿಕೆಯಾಗಬೇಕಿತ್ತು. ಆದ್ರೆ, ಕಂಪನಿಗಳು ಮನಬಂದಂತೆ ಬೆಲೆಗಳನ್ನ ಹೆಚ್ಚಿಸುತ್ತಿವೆ. ಹಣದುಬ್ಬರದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಮೇಲೆ ಇದು ನೇರ ಪರಿಣಾಮ ಬೀರಲಿದೆ.
ಎಲ್ಲ ಕಂಪನಿಗಳೂ ಬೆಲೆ ಏರಿಸುತ್ತಿವೆ.!
ಕಳೆದ ತಿಂಗಳು ಜಿಎಸ್ಟಿ ಜಾರಿಯಾದ ಕೂಡಲೇ ಸುಧಾ ಕಂಪನಿ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರವನ್ನು ಹೆಚ್ಚಿಸಿತ್ತು. ರೂ.10ಕ್ಕೆ ದೊರೆಯುವ 150 ಎಂಎಲ್ ಸುಧಾ ಅವರ ಲಸ್ಸಿ ರೂ.12ಕ್ಕೆ ಲಭ್ಯವಿದೆ. 140 ಎಂಎಲ್ ಮ್ಯಾಂಗೋ ಲಸ್ಸಿ ಬೆಲೆ ಈಗ 10 ರೂ.ಗೆ ಬದಲಾಗಿ 12 ರೂ. ಇದೇ ವೇಳೆ 180 ಎಂಎಲ್ ಮಜ್ಜಿಗೆ ದರ 10ರಿಂದ 12 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 10 ರೂ.ಗೆ ಸಿಗುತ್ತಿದ್ದ 80 ಗ್ರಾಂ ಮೊಸರು ಈಗ 12 ರೂ.ಗೆ ಏರಿಕೆಯಾಗಿದೆ.