ಕೆಎನ್ಎನ್ಡಿಜಟಲ್ ಡೆಸ್ಕ್ : ನಲ್ಗೊಂಡ ಜಿಲ್ಲೆಯಲ್ಲಿ ಭೀಕರ ಅಗ್ನಿ ಪ್ರಮಾದ ಸಂಭವಿಸಿದೆ. ಚಿತ್ಯಾಲ ಮಂಡಲದ ವೆಲಿಮಿನೇಡುನಲ್ಲಿರುವ ಹಿಂದಿಸ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದ್ದು, ರಿಯಾಕ್ಟರ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಪರಿಣಾಮ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತದಲ್ಲಿ ಹಲವಾರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಕೈಗಾರಿಕಾ ಆಡಳಿತ ಮಂಡಳಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಕಂಪನಿಯ ಬಿ ಬ್ಲಾಕ್ʼನಲ್ಲಿ ರಿಯಾಕ್ಟರ್ ಸ್ಫೋಟಗೊಂಡಿದ್ದು, ಭಾರಿ ಬೆಂಕಿ ಮತ್ತು ದಟ್ಟವಾದ ಹೊಗೆ ತುಂಬಿದೆ, ವೆಲಿಮಿನೇಡು, ಪಿಟ್ಟಂಪಲ್ಲಿ, ಬಂಗೋನಿ ಚೆರ್ವು, ಪೆರೆಪಲ್ಲಿ, ಗುಂಡ್ರಂಪಳ್ಳಿ ಮತ್ತು ಪೆದ್ದಕಪರ್ತಿ ಬಳಿಯ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ, ಪ್ರಮಾದಗಳು ಆಗಾಗ್ಗೆ ಸಂಭವಿಸುತ್ತಿವೆ. ನಿಯಮಗಳನ್ನ ಪಾಲಿಸದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದು, ನಿಖರ ಕಾರಣಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.