ಬೆಂಗಳೂರು: ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ 6, 7 ಮತ್ತು 8ರಂದು ನಡೆಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕಾರ್ಮಿಕ ಖಾತೆ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ವಿ ಸುನೀಲ್ ಕುಮಾರ್, ಶಾಸಕರಾದ ನೆಹರು ಓಲೇಕಾರ್, ಶ್ರೀ ಅರುಣಕುಮಾರ ಗುತ್ತೂರ, ಬಳ್ಳಾರಿ ವಿರೂಪಾಕ್ಷಪ್ಪ ರುದ್ರಪ್ಪ, ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿ.ಪಂ. ಮುಖ್ಯ ಕಾರ್ಯನಿರ್ವಾಣಾಧಿಕಾರಿ ಮಹಮ್ಮದ್ ರೋಷನ್, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಲಿಂಗಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ ಮುಂತಾದವರು ಭಾಗವಹಿಸಿದ್ದರು.
ಡಿಸೆಂಬರ್ 23, 24 ಹಾಗೂ 25 ರಂದು ಹಾವೇರಿಯಲ್ಲಿ 86ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚರ್ಚಿಸಿದಾಗ, ಆ ದಿನಾಂಕಗಳAದು ಪೂರ್ವನಿಯೋಜಿತ ಜನಸಂಕಲ್ಪ ಯಾತ್ರೆ ಇದ್ದು ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಿಸಬೇಕಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ವಿಶ್ವದಲ್ಲೇ ಪ್ರಥಮಬಾರಿಗೆ “ಅಂತರರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರಿ” ನಡೆಯುಲಿರುವುದರಿಂದ ಹಾಗೂ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನ ಮೂರು ದಿನ ನಡೆಯಲಿರುವ ಹಿನ್ನೆಲೆಯಲ್ಲಿ, ಹಾವೇರಿ ಸಮ್ಮೇಳನವನ್ನು 2023ರ ಜನವರಿ 6, 7, 8ರ ಶುಕ್ರವಾರ, ಶನಿವಾರ ಮತ್ತು ರವಿವಾರದಂದು ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದಿನಾಂಕವನ್ನು ಖಚಿತಪಡಿಸಿಕೊಳ್ಳಲಾಗಿದೆ.
ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾನಾ ಕಾರಣಗಳಿಂದ ಅನೇಕ ಬಾರಿ ಮುಂದೂಡಲಾಗಿದ್ದು, ಈ ದಿನಾಂಕಗಳು ನಿಶ್ಚಿತವಾಗಿದ್ದು, ಮತ್ತೆ ಬದಲಾವಣೆ ಇಲ್ಲವೆಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಯಾವುದೇ ಕಾರಣಕ್ಕೂ ಈಗ ನಿರ್ಧಾರವಾಗಿರುವ ದಿನಾಂಕಗಳನ್ನು ಬದಲಾಯಿಸಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟವಾದ ನಿಲುವನ್ನು ಸಭೆಯಲ್ಲಿ ತೋರಿಸಿದರು.
ಛಾಯಾಚಿತ್ರ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ 6, 7 ಮತ್ತು 8ರಂದು ನಡೆಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆ.