ನವದೆಹಲಿ : ಪ್ರತಿ ಕಾರಿನಲ್ಲಿ ಆರು ಏರ್ಬ್ಯಾಗ್ಗಳನ್ನು ಒದಗಿಸುವಂತೆ ಆಟೋಮೊಬೈಲ್ ತಯಾರಕರನ್ನು ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಕಾರಿನಲ್ಲಿನ ಪ್ರತಿ ಏರ್ಬ್ಯಾಗ್ಗೆ ಕೇವಲ 800 ರೂ.ಗಳ ಬೆಲೆ ಇರುವುದರಿಂದ, ಕಾರುಗಳಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯವಾಗಿ ಹೆಚ್ಚಿನ ಏರ್ಬ್ಯಾಗ್ಗಳನ್ನು ಒದಗಿಸುವಂತೆ ಆಟೋಮೊಬೈಲ್ ತಯಾರಕರನ್ನ ಕೇಳಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಸಂಸತ್ತಿಗೆ ಮಾಹಿತಿ ನೀಡಿದರು.
ಪ್ರಸ್ತುತ, ಪ್ರತಿ ಕಾರಿನಲ್ಲಿ ಕೇವಲ ಎರಡು ಏರ್ಬ್ಯಾಗ್ಗಳನ್ನು ಮಾತ್ರ ಕಡ್ಡಾಯಗೊಳಿಸಲಾಗಿದೆ; ಹಿಂದಿನ ಆಸನಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರವು ಇನ್ನೂ ನಾಲ್ಕು ಪ್ರಸ್ತಾಪ ಮಾಡಿದೆ. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಗಡ್ಕರಿ ರಾಜ್ಯಸಭೆಯಲ್ಲಿ ತಿಳಿಸಿದರು.
ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಕ್ಕೆ ಬಲಿಯಾಗ್ತಿದ್ದು, ದೇಶದಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಅದರ ಪರಿಣಾಮವಾಗಿ ಸಂಭವಿಸುವ ಸಾವುಗಳನ್ನ 2024ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡುವ ಗುರಿ ನಿಗದಿಪಡಿಸಲಾಗಿದೆ. ಈ ಮೂಲಕ ಈ “ಕಪ್ಪು ಚುಕ್ಕೆಗಳನ್ನ” ತೆಗೆದುಹಾಕಲಾಗುತ್ತಿದೆ ಎಂದು ಗಡ್ಕರಿ ಮೇಲ್ಮನೆಗೆ ಮಾಹಿತಿ ನೀಡಿದರು.
ವಿಶ್ವ ಗುಣಮಟ್ಟದ ಸುರಕ್ಷತಾ ತಪಾಸಣೆಗೆ ಒಳಪಟ್ಟ ನಂತ್ರ ವಾಹನಗಳಿಗೆ ಸ್ಟಾರ್ ರೇಟಿಂಗ್ ನೀಡಲು ಕೇಂದ್ರ ಸರ್ಕಾರವು ‘ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ’ ನಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. ಮಾರುಕಟ್ಟೆಯಲ್ಲಿ ಯಾವುದೇ ವಾಹನವನ್ನ ಪರಿಚಯಿಸುವ ಮೊದಲು, ಈ ಮಾನದಂಡಗಳ ಪ್ರಕಾರ ಕ್ರ್ಯಾಶ್-ಟೆಸ್ಟ್ಗಳನ್ನು ಕಡ್ಡಾಯವಾಗಿ ನಡೆಸಬೇಕಾಗುತ್ತದೆ ಎಂದು ಹೇಳಿದರು.