ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರುತ್ತಿರುವ ಸಮಯದಲ್ಲಿ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಚಿಲ್ಲರೆ ಬೆಲೆಗಳನ್ನು ಸ್ಥಿರವಾಗಿರಿಸುವುದನ್ನು ಮುಂದುವರಿಸಿದ್ದರೂ ಸಹ, ಪೆಟ್ರೋಲ್ ಡಿಸೇಲ್ ದರದಲ್ಲಿ ಭಾರಿ ಏರಿಕೆಯಾಗಿದೆ.
ಹೌದು ಖಾಸಗಿ ಇಂಧನ ಚಿಲ್ಲರೆ ವ್ಯಾಪಾರಿಗಳಾದ ನಯಾರ ಎನರ್ಜಿ ಮತ್ತು ಶೆಲ್ ಬೆಂಗಳೂರು ಸೇರಿದಂತೆ, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಈಗಾಗಲೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ವೆಚ್ಚಗಳೊಂದಿಗೆ ಹೋರಾಡುತ್ತಿರುವ ಗ್ರಾಹಕರಲ್ಲಿ ಇದು ಹೊಸ ಕಳವಳವನ್ನು ಉಂಟು ಮಾಡಿದೆ.
ಬೆಂಗಳೂರಿನಲ್ಲಿ ಖಾಸಗಿ ಇಂಧನ ಮಳಿಗೆಗಳಲ್ಲಿ ಪೆಟ್ರೋಲ್ ಬೆಲೆ ತೀವ್ರವಾಗಿ ಏರಿದ್ದು, ಸಿಲಿಕಾನ್ ವ್ಯಾಲಿಯ ಹಲವಾರು ಭಾಗಗಳಲ್ಲಿ ಲೀಟರ್‌ಗೆ ₹120 ದಾಟಿದೆ. ಡೀಸೆಲ್ ಬೆಲೆಗಳಲ್ಲಿ ಸಹ ಗಮನಾರ್ಹ ಏರಿಕೆ ಕಂಡು ಬಂದಿದೆ. ದೇಶಾದ್ಯಂತ ಇತರ ಮಹಾನಗರಗಳಲ್ಲಿ ಇದೇ ರೀತಿ ಬೆಲೆ ಏರಿಕೆಯಾಗಿರುವ ಬಗ್ಗೆ ವರದಿಯಾಗಿವೆ. ಖಾಸಗಿ ಚಿಲ್ಲರೆ ವ್ಯಾಪಾರಿಗಳು ಸರ್ಕಾರಿ ಸ್ವಾಮ್ಯದ ಮಳಿಗೆಗಳಿಗೆ ಹೋಲಿಸಿದರೆ ಬೆಲೆಗಳಲ್ಲಿ ಹೆಚ್ಚಳ ಮಾಡಿದ್ದಾರೆ.
ಆದರೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್)ಗಳು ಹೆಚ್ಚುತ್ತಿರುವ ನಷ್ಟದ ಹೊರತಾಗಿಯೂ ಸ್ಥಿರ ಚಿಲ್ಲರೆ ಬೆಲೆಗಳನ್ನು ಕಾಯ್ದುಕೊಂಡಿವೆ.








