ಮ್ಯಾನ್ಮಾರ್ : ಮ್ಯಾನ್ಮಾರ್ ಸೇನೆಯು ಪ್ರಜಾಪ್ರಭುತ್ವ ಪರ ಪ್ರತಿರೋಧ ಗುಂಪಿನ ನಿಯಂತ್ರಣದಲ್ಲಿರುವ ಹಳ್ಳಿಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ಕನಿಷ್ಠ 27 ನಾಗರಿಕರು ಸಾವನ್ನಪ್ಪಿ, 30 ಮಂದಿ ಗಾಯಗೊಂಡರು ಎಂದು ವಿರೋಧ ಪಕ್ಷಗಳು ಶನಿವಾರ ಈ ಹೇಳಿಕೆ ನೀಡಿವೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮ್ಯಾನ್ಮಾರ್ ಸೇನೆಯು ಸಿಂಗು ಟೌನ್‌ಶಿಪ್‌ನಲ್ಲಿರುವ ಲೆಟ್ ಪ್ಯಾನ್ ಹ್ಲಾ ಗ್ರಾಮದ ಮೇಲೆ ವೈಮಾನಿಕ ದಾಳಿ ನಡೆಸಿತು. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ಈ ಗ್ರಾಮವು ಸುಮಾರು 65 ಕಿ.ಮೀ ದೂರದಲ್ಲಿದೆ ಎಂದು ಮಂಡಲೆ ಪೀಪಲ್ಸ್ ಡಿಫೆನ್ಸ್ ಫೋರ್ಸ್‌ನ ವಕ್ತಾರರು ತಿಳಿಸಿದ್ದಾರೆ. ಆದರೆ, ಈ ವಾಯುದಾಳಿಯ ಬಗ್ಗೆ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫೆಬ್ರವರಿ 1, 2021 ರಂದು, ಮ್ಯಾನ್ಮಾರ್‌ನಲ್ಲಿ ಸೇನೆಯು ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿತು, ನಂತರ ದೇಶದಲ್ಲಿ ಬೃಹತ್ ಪ್ರತಿಭಟನೆಗಳು ಪ್ರಾರಂಭವಾದವು. ಶಾಂತಿಯುತ ಪ್ರದರ್ಶನಗಳನ್ನು ಸೇನೆಯು ಬಲಪ್ರಯೋಗದಿಂದ ಹತ್ತಿಕ್ಕಿತು ಮತ್ತು ಅನೇಕ ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡರು. ಈಗ ದೇಶದ ಬಹುಭಾಗದಲ್ಲಿ ಸಂಘರ್ಷ ನಡೆಯುತ್ತಿದೆ.
ಲೆಟ್ ಪ್ಯಾನ್ ಹ್ಲಾ ಗ್ರಾಮದ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಗುರಿಯಾಗಿಸಿಕೊಂಡು ನಡೆದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ 27 ಜನರಲ್ಲಿ ಆರು ಮಕ್ಕಳು ಸೇರಿದ್ದಾರೆ ಎಂದು ಗುಂಪು ಶನಿವಾರ ತನ್ನ ಟೆಲಿಗ್ರಾಮ್ ಸಾಮಾಜಿಕ ಮಾಧ್ಯಮ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.