ಹುಬ್ಬಳ್ಳಿ : ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸಂಚಲನ ಸೃಷ್ಠಿಸಿದ ಬೆನ್ನಲ್ಲೇ, ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ದಿಢೀರ್ ಬೆಳವಣಿಗೆ ಎನ್ನುವಂತೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದಕ್ಕೆ ಈಗ ಸಭಾಪತಿ ಬಸವರಾಜ್ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಅವರು, ವೈರಲ್ ಆದ ಪತ್ರದಲ್ಲಿ ಸಹಿ ಇಲ್ಲ. ಸಹಿ ಮಾಡಿದ ಪತ್ರ ಲಾಕರ್ ನಲ್ಲಿದೆ. ನನ್ನ ಪಿಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ. ಆದರೆ ಸಚಿವರು ಸೇರಿದಂತೆ ಬಹಳ ಜನ ನನಗೆ ಕರೆ ಮಾಡುತ್ತಿದ್ದಾರೆ. ದುಡುಕಿನ ನಿರ್ಧಾರ ಬೇಡ ಅಂತ ಹೇಳುತ್ತಿದ್ದಾರೆ.
ಕೆಲವು ಸಲ ಹಿತೈಷಿಗಳ ಮಾತು ಕೇಳಬೇಕಾಗುತ್ತದೆ. ಪತ್ರ ಇನ್ನೂ ಲಾಕರ್ ನಲ್ಲಿದೆ ರಾಜೀನಾಮೆ ಕುರಿತು ವಿಚಾರ ಮಾಡುತ್ತೇನೆ. ಮಾನಸಿಕವಾಗಿ ಬೇಸರವಾಗಿದ್ದು ನಿಜ. ಹೀಗಾಗಿ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಮಾಡಿದ್ದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.