ಬೆಂಗಳೂರು : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಕೋ ಕಿಲ್ಲರ್ ವಿಘ್ನೇಶ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಬಳಿಕ ಆರೋಪಿ ವಿಘ್ನೇಶ್ ತಮಿಳುನಾಡಿಗೆ ಪರಾರಿಯಾಗಿದ್ದ ಎಂದು ಶಂಕೆ ವ್ಯಕ್ತವಾಗಿತ್ತು. ಆರೋಪಿ ಪತ್ತೆಗೆ ಪ್ರತ್ಯೇಕ ಎರಡು ತಂಡಗಳನ್ನ ರಚನೆ ಮಾಡಿ ಹುಡುಕಾಟ ನಡೆಸಿದ್ದು, ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಸದ್ಯ ಶ್ರೀರಾಂಪುರ ಠಾಣೆ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ವಿಘ್ನೇಶ್ ಜೊತೆಗೆ ಹರೀಶನನ್ನ ಬಂಧಿಸಲಾಗಿದೆ. ಕೊಲೆಯ ಬಳಿಕ ವಿಘ್ನೇಶ್ ನನ್ನು ಬೈಕ್ ನಲ್ಲಿ ಹರೀಶ್ ಕರೆದೋಯ್ದಿದ್ದ. ಬೈಕ್ ನಲ್ಲಿ ಸೋಲದೇವನಹಳ್ಳಿ ಕಡೆಗೆ ಕರೆದುಕೊಂಡು ಹೋಗಿದ್ದ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಪೊಲೀಸರು, ಸೋಲದೇವನಹಳ್ಳಿ ಮನೆಯೊಂದರಲ್ಲಿ ಇದ್ದಾರೆ ಎಂಬ ಮಾಹಿತಿ ಬಂದಿದೆ. ಕೊಲೆ ನಡೆದ 14 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಮೃತ ಯುವತಿಗೆ ಬಲವಂತವಾಗಿ ಮಾಂಗಲ್ಯ ಕೂಡ ಕಟ್ಟಿದ್ದನಂತೆ. ಈ ವಿಚಾರ ಮನೆಯಲ್ಲಿ ತಿಳಿಸಿದ್ರೆ ಕೊಲೆ ಮಾಡ್ತೇನೆ ಎಂದು ಬೆದರಿಸಿದ್ದನಂತೆ. ಇನ್ನೂ ಇಬ್ಬರು ಒಂದೇ ಏರಿಯಾದವರಾಗಿದ್ದು, ಆಕೆಯ ಪೋಷಕರಿಗೆ ಹೆಣ್ಣು ಕೇಳಿದ್ದನಂತೆ, ಆದರೆ ಅವರು ನಿರಾಕರಿಸಿದ್ದರು. ಬಳಿಕ ಒಂದು ಸಾರಿ ಗಲಾಟೆ ಮಾಡಿದಾಗ ಆತನ ವಿರುದ್ಧ ಯಾಮಿನಿ ಪೋಷಕರು ದೂರು ಕೊಟ್ಟಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಯಾಮಿನಿ ಮನೆ ಬಳಿಯೇ ಇದ್ದ ವಿಘ್ನೇಶ್ ಹಲವು ವರ್ಷಗಳಿಂದ ಇದ್ದುದ್ದರಿಂದ ಆತ ಪರಿಚಿತ. ಜೊತೆಗೆ ಆಕೆಯನ್ನು ಪ್ರೀತಿ ಮಾಡುತ್ತಿದ್ದ. ಯಾಮಿನಿಗೆ ಆತ ಇಷ್ಟವಿರಲಿಲ್ಲ. ಹಾಗಾಗಿ ಪ್ರೀತಿ ನಿರಾಕರಿಸಿದ್ದಳು. ಪ್ರೀತಿಸು ಎಂದು ಹಿಂದೆ ಬಿದ್ದಿದ್ದ. ಆದರೂ ಒಪ್ಪದ ಕಾರಣ ಆಕೆ ಕಾಲೇಜಿನಿಂದ ಮನೆಗೆ ಬರುವುದನ್ನು ತಿಳಿದಿದ್ದ ಆತ ಸರಿಯಾದ ಸಮಯ ಗೊತ್ತು ಮಾಡಿಕೊಂಡು ಕೊಲೆ ಮಾಡಿದ್ದಾನೆ.
ಜಾಗ ಫಿಕ್ಸ್ ಮಾಡಿ ಕೊಲೆ
ಯಾಮಿನಿ ಬನಶಂಕರಿಯಲ್ಲಿರುವ ತನ್ನ ಕಾಲೇಜಿಗೆ ಬಿಎಂಟಿಸಿ ಬಸ್‌ನಲ್ಲಿ ಓಡಾಡುತ್ತಿದ್ದಳು. ಹಲವು ವರ್ಷಗಳಿಂದ ಆಕೆ ವಿಘ್ನೇಶ್‌ಗೆ ಪರಿಚಯವಿದ್ದ ಕಾರಣ, ಆಕೆ ಎಲ್ಲಿಂದ ಎಲ್ಲಿಗೆ, ಹೇಗೆ ಮನೆಗೆ ತೆರಳುತ್ತಾಳೆ ಎಂಬ ಇಂಚಿಂಚೂ ಮಾಹಿತಿ ಆತನಿಗೆ ಗೊತ್ತಿತ್ತು. ಕೊಲೆಯಾಗುವ ದಿನ ಯಾಮಿನಿ ಬೆಳಿಗ್ಗೆ ಏಳು ಗಂಟೆಗೆ ಪರೀಕ್ಷೆ ಇದೆ ಎಂದು ಹೇಳಿ ತೆರಳಿದ್ದಳು. ಅಂದು ಆಕೆ ವಾಪಸ್ ಬರುವಿಕೆಗಾಗಿ ಶ್ರೀರಾಂಪುರ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ ವಿಘ್ನೇಶ್ ಕಾದು ನಿಂತಿದ್ದ. ಬನಶಂಕರಿ ಮೂರನೇ ಹಂತದಿಂದ ಬಸ್‌ನಲ್ಲಿ ಶ್ರೀರಾಂಪುರಕ್ಕೆ ಮಧ್ಯಾಹ್ನ 2.30ರ ಸುಮಾರಿಗೆ ಬಂದು ಇಳಿದುಕೊಂಡಳು.
ಅಲ್ಲಿಂದ ಆಕೆ ರೈಲ್ವೆ ಹಳಿಯ ಪಕ್ಕದ ಕಾಲು ದಾರಿಯಲ್ಲಿ ತನ್ನ ಮನೆಗೆ ನಿತ್ಯ ಹೋಗುವಂತೆ ನಡೆದುಕೊಂಡು ಹೋಗುತ್ತಿದ್ದಳು. ಜೊತೆಗೆ ಆಕೆಯನ್ನು ವಿಘ್ನೇಶ್ ಹಿಂಬಾಲಿಸಿಕೊಂಡು ಹೋದ. ಬಳಿಕ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ, ಆಕೆ ಕಣ್ಣು ಉಜ್ಜಿಕೊಳ್ಳುತ್ತಿದ್ದಳು, ಏನಾಗುತ್ತಿದೆ, ಏನುಮಾಡಬೇಕು ಎನ್ನುವುದೇ ಆಕೆಗೆ ದಿಕ್ಕು ತೋಚದಂತಾಗಿತ್ತು. ಕೊನೆಗೆ ಆಕೆ ಕಣ್ಣು ಬಿಡುವ ಮುನ್ನವೇ ಚಾಕುವಿನಿಂದ ಮೂರ್ನಾಲ್ಕು ಬಾರಿ ಇರಿದಿದ್ದಾನೆ. ನಂತರ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.