ಚಾಮರಾಜನಗರ : ಅಭಿವೃದ್ಧಿ ಕಾಣದ ಹಾಗೂ ಹಿಂದುಳಿದ ಜಿಲ್ಲೆ, ಅದರಲ್ಲೂ ಈ ಒಂದು ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಹಣೆಪಟ್ಟಿ ಹೊಂದಿದ್ದ ಚಾಮರಾಜನಗರದಲ್ಲಿ ಇದೀಗ ಸಂಪುಟ ಸಭೆ ನಡೆಸಲು ಮುಹೂರ್ತ ಫಿಕ್ಸ್ ಆಗಿದೆ.
ಹೌದು ಚಾಮರಾಜನಗರಕ್ಕೆ ಭೇಟಿ ನೀಡಿದ ರಾಜಕೀಯ ನಾಯಕರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಹಣೆಪಟ್ಟಿಯನ್ನು ಜಿಲ್ಲೆ ಹೊಂದಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೆ ಚಾಮರಾಜನಗರದ ಮಲೆ ಮಾದೇಶ್ವರ ಬೆಟ್ಟದಲ್ಲಿ ಫೆಬ್ರವರಿ 15ರಂದು ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ಸಚಿವ ಕೆ ವೆಂಕಟೇಶ್ ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲೆಗೆ ಅಗತ್ಯವಿರುವ ಮೂಲ ಸೌಕರ್ಯ ನಿವಾರಣೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸಂಪೂರ್ಣ ಒಳಚರಂಡಿ ವ್ಯವಸ್ಥೆ, ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಯೋಜನೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಗ್ರಾಮಾಂತರ ಮತ್ತು ನಗರ, ಪಟ್ಟಣ ಪ್ರದೇಶಗಳಿಗೆ ಪರಿಪೂರ್ಣ ಮೂಲ ಸೌಕರ್ಯ, ಹಾಡಿ ಜನರಿಗೆ ಮೂಲ ಸೌಕರ್ಯದ ಕುರಿತು ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.
ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಯ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ತೊಡೆದುಹಾಕುವಲ್ಲಿ ಸಿಎಂ ಸಿದ್ದರಾಮಯ್ಯ ಫೆಬ್ರವರಿ 15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದಾರೆ.







