ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸ್ನೇಹಮಯಿ ಕೃಷ್ಣ ಅವರು ಈ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ನ್ಯಾ.ಎಂ ನಾಗಪ್ರಸನ್ನ ಅವರು, ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ಇದೆ ವೇಳೆ ಲೋಕಾಯುಕ್ತ ಪೊಲೀಸರ ಅಂತಿಮ ವರದಿ ಸಲ್ಲಿಸುವ ವಿಚಾರವಾಗಿ ಆದೇಶ ಪ್ರಕಟಿಸುವವರೆಗೂ ಹೈಕೋರ್ಟ್ ಗಡುವು ವಿಸ್ತರಿಸಿದೆ.
ವಿಚಾರಣೆಯ ಆರಂಭದಲ್ಲಿ ರಾಜ್ಯ ಸರ್ಕಾರದ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಲೋಕಾಯುಕ್ತ ತನಿಖೆ ತಾರತಮ್ಯಪೂರಿತವಾಗಿದ್ದಾಗ ಬೇರೆ ಸಂಸ್ಥೆಯಿಂದ ತನಿಖೆ ಕೋರಬಹುದು. ಈ ಕೇಸ್ ನಲ್ಲಿ ಇದ್ಯಾವುದು ಆಗದಿದ್ದರೂ ಸಿಬಿಐ ತನಿಖೆ ಕೋರುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ವರದಿಯಲ್ಲಿ ಏನಿದೆ ಎಂಬುದನ್ನು ಯಾರು ನೋಡಿಲ್ಲ ಎಂದು ಅವರು ವಾದ ಮಂಡಿಸಿದರು.
ಲೋಕಾಯುಕ್ತ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಿದ್ದಾರೆ. ಹಾಗಾದರೆ ಸಿಬಿಐ ಕೂಡ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ ಎನ್ನಲಾಗುವುದಿಲ್ಲ. ಪೋಲೀಸರ ಮೇಲೆ ಲೋಕಾಯುಕ್ತ ಸಂಸ್ಥೆಯ ನಿಗಾ ಇದೆ ಹೀಗಾಗಿ ಲೋಕಾಯುಕ್ತ ತನಿಖೆ ಸ್ವತಂತ್ರವಾಗಿರಲಿದೆ. ಸಿಬಿಐ ಸ್ವತಂತ್ರ ಎಂದಾದರೆ ಲೋಕಾಯುಕ್ತ ಕೂಡ ಸ್ವತಂತ್ರ ಸಂಸ್ಥೆ. ಲೋಕಾಯುಕ್ತ ತನಿಖೆ ಸೂಕ್ತವಾಗಿದೆ.ಹೀಗಾಗಿ ಸಿಬಿಐ ಮೇಲಿನ ಅಭಿಪ್ರಾಯವನ್ನು ಹೋಗಲಾಡಿಸಬೇಕು ಲೋಕಾಯುಕ್ತ ಪೊಲೀಸರನ್ನು ಸಂಶಯಿಸಬಾರದು ಎಂದು ಕಪಿಲ್ ಸಿಬಲ್ ವಾದ ಅಂತ್ಯಗೊಳಿಸಿದರು.
ಬಳಿಕ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದು, ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಿಬಿಐಗೆ ಹಸ್ತಾಂತರ ಸರಿಯಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆ ಕೋರಿದರು. ತನಿಖೆ ಆಗುವ ಮೊದಲೇ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಯ ಲೋಪವೇನು ಎಂದು ಹೇಳಿಲ್ಲ. ಆರೋಪಿ ಸ್ಥಾನದಲ್ಲಿ ಸಿಎಂ ಇದ್ದಾರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದು ತಪ್ಪು ಮೇಲ್ ಪಂಕ್ತಿಗೆ ಕಾರಣವಾಗುತ್ತದೆ ಎಂದು ಅಭಿಷೇಕ್ ಮನುಸಿಂಗ್ವಿ ವಾದ ಮಂಡಿಸಿದರು.
ಸಿಎಂ ಆಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಆರೋಪ ಒಪ್ಪಲು ಸಾಧ್ಯವಿಲ್ಲ. ಹೀಗಾದರೆ ಎಲ್ಲಾ ಸಿಎಂ ಗಳ ಸಚಿವರ ಕೇಸ್ಗಳು ಸಿಬಿಐಗೆ ಹೋಗಬೇಕೇ? FIR ದಾಖಲಾಗುವ ಮೊದಲೇ ಇವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಿಎಂ ಎಂಬ ಒಂದೇ ಕಾರಣಕ್ಕೆ ಲೋಕಾಯುಕ್ತ ಪೊಲೀಸರ ತನಿಖೆ ಪ್ರಶ್ನಿಸಿದ್ದಾರೆ. ಹೀಗಾಗಿ ತನಿಖಾ ವರದಿಯ ಅರ್ಹತೆಯನ್ನು ಇಲ್ಲಿ ಪ್ರಶ್ನಿಸಿಲ್ಲ. ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪ್ರಶ್ನಿಸಿದರು. ಸಿಬಿಐಗೆ ಹಸ್ತಾಂತರಿಸಲು ಈ ಕೇಸ್ ಅಪರೂಪದಲ್ಲಿ ಅಪರೂಪವಲ್ಲ. ಲೋಕಾಯುಕ್ತ ಪೊಲೀಸರ ತನಿಖೆಯ ಮಧ್ಯದಲ್ಲಿ ಹಸ್ತಾಂತರ ಸರಿಯಲ್ಲ. ಸಿಎಂ ಸಚಿವರ ವಿರುದ್ಧದ ಕೇಸ್ ಸಿಬಿಐಗೆ ಹೋಗಬೇಕೇ? ಹೀಗೆಂದಾದರೆ ಸಿಬಿಐಗೆ ಕೇಸ್ ಗಳ ಮಹಾಪೂರವೇ ಹರಿದು ಹೋಗುತ್ತದೆ ಎಂದು ವಾದಿಸಿದರು.
ಲೋಕಾಯುಕ್ತ ಸಂಸ್ಥೆಯ ಕಡೆಗೆ ಎಲ್ಲರೂ ಬರುತ್ತಾರೆ ಸಿಎಂ ಡಿಸಿಎಂ ಉನ್ನತ ಅಧಿಕಾರಿಗಳು ಕೂಡ ಬರುತ್ತಾರೆ. ರಾಜಕೀಯ ಬಣ್ಣವಿದೆ ಎಂಬ ಕಾರಣಕ್ಕೆ ಸಿಬಿಐಗೆ ನೀಡಬಾರದು ದೂದಾರ ಮೊದಲಿಗೆ ಸಿಪಿಐ ತನಿಖೆ ಕೋರಿರಲಿಲ್ಲ. ಈಗ ಸಿಬಿಐ ತನಿಖೆ ಕೋರುತ್ತಿದ್ದಾರೆ ಇದನ್ನು ಪರಿಗಣಿಸಬೇಕು. ಸಿಎಂ ಪರ ಅಭಿಷೇಕ್ ಮನು ಸಿಂಗ್ವಿ ವಾದ ಅಂತ್ಯಗೊಳಿಸಿದರು.
ಇದಾದ ಬಳಿಕ ಸಿಎಂ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಮುಡಾ ಲೇಔಟ್ ಪ್ಲಾನ್ ಕೋರ್ಟಿಗೆ ನೀಡಿದ ವಕೀಲರು ಸರ್ವೆ ನಂಬರ್ 464 ದೇವನೂರು ಲೇಔಟ್ ನ ಭಾಗವಾಗಿರಲಿಲ್ಲ. ಭೂ ಮಾಲೀಕರು ಪರಿಹಾರದ ಹಣವು ಪಡೆದಿರಲಿಲ್ಲ. ಕೋರ್ಟ್ ನಿಂದ ಪರಿಹಾರದ ಹಣವನ್ನು ವಾಪಸ್ ಪಡೆಯಲಾಗಿತ್ತು. ಹೀಗಾಗಿ ಈ ಜಮೀನು ಡಿನೋಟಿಫಿಕೇಶನ್ ಆಗಿತ್ತು. ಸಿಬಿಐ ಪ್ರಧಾನ ಮಂತ್ರಿ ಕಛೇರಿ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಸಿಬಿಐ ಈ ಕೇಸ್ ಅನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಇದಾದ ನಂತರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು. ಸಿಬಿಐ ಅಥವಾ ಇದರ ಸ್ವತಂತ್ರ ಸಂಸ್ಥೆಯಿಂದ ತನಿಖೆ ಆಗಬೇಕು ಹೀಗೆಂದು ಮೊದಲ ದಿನದಿಂದಲೇ ಮನವಿಗಳನ್ನು ನೀಡುತ್ತಿದ್ದೇವೆ. ಸಾರ್ವಜನಿಕ ವಿಶ್ವಾಸಾರ್ಹತೆ ಕಾಪಾಡಲು ಸಿಬಿಐ ತನಿಖೆ ಅಗತ್ಯವಿದೆ. 60 ಕೋಟಿ ಮೌಲ್ಯದ ಆಸ್ತಿ ಲೂಟಿ ಆಗಿರುವ ಬಗ್ಗೆ ಇವರಿಗೆ ನೋವಿಲ್ಲ. ಸಿಎಂ ರಿಟ್ ಅರ್ಜಿಯಲ್ಲಿ ದೇವರಾಜು ಪ್ರತಿವಾದಿಯಾಗಿಸಿಲ್ಲ. ಅದನ್ನೇ ಮುಂದಿಟ್ಟು ಈಗ ಪ್ರಹಸನ ಮಾಡುತ್ತಿದ್ದಾರೆ.
ಆರೋಪಿ ಸಿಎಂ ಎಂಬ ಒಂದೇ ಕಾರಣಕ್ಕೆ ಸಿಬಿಐ ತನಿಖೆಗೆ ಆದೇಶಿಸಿದ ಉದಾಹರಣೆಗಳು ಇವೆ ಎಂದು ಮುಲಾಯಂ ಸಿಂಗ್ ಯಾದವ್ ಕೆಸಿನ ತೀರ್ಪು ಓದಿದರು.ಸಿಎಂ ಉಳಿಸಲು ಇಡೀ ಸಚಿವ ಸಂಪುಟವೇ ಒಮ್ಮತದ ನಿರ್ಣಯ ಕೈಗೊಂಡಿತ್ತು. ತನಿಖೆಯ ವಿಶ್ವಾಸಾರ್ಹತೆ ಕಾಪಾಡಲು ಸ್ವತಂತ್ರ ತನಿಖೆಯ ಅಗತ್ಯವಿದೆ. ಸರ್ಕಾರದ ಉನ್ನತ ವ್ಯಕ್ತಿಗಳು ಆರೋಪಿಯಾಗಿದ್ದಾಗ ಇದು ಅಗತ್ಯ ಎಂದು ಮಣಿಂದರ್ ಸಿಂಗ್ ವಾದಿಸಿದರು.