ಉಡುಪಿ : ಉಡುಪಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದು ಆಕೆಯ ಮೇಲೆಯೇ ಓರೆಯಾಗಿ ಮಗುಚಿ ಬಿದ್ದ ಘಟನೆ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಉಪ್ರಳ್ಳಿ ಮೂಲದ ಆರತಿ ಶೆಟ್ಟಿ ಎಂಬ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು ಆರತಿ ಅವರು ತಮ್ಮ ಸ್ಕೂಟರ್ ಮೇಲೆ ರಸ್ತೆಯಲ್ಲಿ ತೆಳ್ಳುತ್ತಿದ್ದ ವೇಳೆ ಪಕ್ಕದಲ್ಲಿ ತೆರಳುತ್ತಿದ್ದ ಮಣ್ಣು ತುಂಬಿದ ಲಾರಿ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಲಾರಿಯು ಮುಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಆರತಿಯವರ ಮೇಲೆ ಬಿದ್ದಿದ್ದರಿಂದ ಅವರು ಮಣ್ಣಿನ ಅಡಿ ಸಿಲುಕಿದ್ದರು. ಈ ವೇಳೆ ಸಮಾಜ ಸೇವಕ ಅಶೋಕ್ ಪೂಜಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಣ್ಣಿನ ಅಡಿ ಮಹಿಳೆ ಬಿದ್ದಿದ್ದನ್ನು ನೋಡಿದ ತಕ್ಷಣ ಅಶೋಕ್ ಪೂಜಾರಿಯವರು ಕೂಡಲೇ ಮಣ್ಣನ್ನು ತೆಗೆದು ಮಹಿಳೆಯನ್ನು ರಕ್ಷಿಸಿ ಸ್ಥಳೀಯರ ಸಹಕಾರದಿಂದ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಶೋಕ್ ಪೂಜಾರಿಯವರ ಈ ಒಂದು ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.