ಕಲಬುರ್ಗಿ : ಕಲ್ಬುರ್ಗಿಯ ಸೆಂಟ್ರಲ್ ಜೈಲಿನ ಕರ್ಮಕಾಂಡ ಬಯಲಾಗಿದೆ. ಸೆಂಟ್ರಲ್ ಜೈಲಿನೊಳಗಡೆ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಾ ಸಿಗರೇಟ್ ಸಿಗುತ್ತಾ ಬಿಂದಾಸ್ ಆಗಿದ್ದಾರೆ. ಅಲ್ಲದೆ ಸೆಲ್ ಒಳಗಡೆ ಕಂತೆ ಕಂತೆ ನೋಟು ಎಣಿಸಿಕೊಳ್ಳುತ್ತಿದ್ದಾರೆ. ಕೈದಿಗಳು ಮೋಜು ಮಾಸ್ತಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಹೌದು ಕಲ್ಬುರ್ಗಿ ಸೆಂಟ್ರಲ್ ಜೈಲಿನ ಮತ್ತಷ್ಟು ವಿಡಿಯೋಗಳು ಇದೀಗ ವೈರಲ್ ಆಗಿದೆ. ನಿನ್ನೆ ಕಲಬುರ್ಗಿ ಜೈಲಿನಿಂದ ಆರು ಕೈದಿಗಳ ಸ್ಥಳಾಂತರ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಎರಡು ತಿಂಗಳ ಹಿಂದಿನ ವಿಡಿಯೋ ಕೈದಿಗಳು ವೈರಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ಮಾರ್ಟ್ ಫೋನ್ ಗಳು, ಬಿಡಿ ಸಿಗರೇಟ್, ರಾಶಿ ಹಾಕಿರುವ ವಿಡಿಯೋಗಳು ವೈರಲ್ ಆಗಿವೆ. ಜೈಲು ಮುಖ್ಯ ಅಧಿಕ್ಷಕಿ ಅನಿತಾ ಅವರನ್ನು ಟಾರ್ಗೆಟ್ ಮಾಡಿ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯ ಅಧಿಕ್ಷಕಿ ಅನಿತಾ ಅವರ ವರ್ಗಾವಣೆಗೆ ಈ ಒಂದು ಹುನ್ನಾರ ನಡೆದಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಅಕ್ಟೋಬರ್ 14ರಂದು ಅನಿತಾ ಅವರು ಜೈಲು ಮುಖ್ಯ ಅಧಿಕ್ಷಕಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಆದರೆ ಅನಿತಾ ಅವರನ್ನು ಈ ಕಾರಣಕ್ಕಾಗಿ ವರ್ಗಾವಣೆ ಮಾಡಲು ಜೈಲಿನಲ್ಲಿ ವಿಡಿಯೋಗಳನ್ನು ಮಾಡಿ ವೈರಲ್ ಮಾಡಲಾಗಿದೆ. ಮುಖ ಕಾಣದಂತೆ ತಲೆಗೆ ಕ್ಯಾಪ್ ಧರಿಸಿರುವ ಖೈದಿಗಳು ವಿಡಿಯೋ ಮಾಡಿದ್ದಾರೆ. ಕೆಲವು ಜೈಲಿನ ಸಿಬ್ಬಂದಿ ಜೊತೆ ಸೇರಿ ಷಡ್ಯಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ.