ಶಿವಮೊಗ್ಗ : ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ಗಳನ್ನು ಕಳುಹಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಿವಮೊಗ್ಗದ ಕೋಟೆ ಠಾಣೆಯ ಪೊಲೀಸರು ಮಾನಸಿಕ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಮಾನಸಿಕ ರೋಗಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೌಹಾರ್ದ್ ಪಟೇಲ್ ಎಂದು ತಿಳಿದುಬಂದಿದೆ. ಈತ ವೈಯಕ್ತಿಕ ದ್ವೇಷಕ್ಕಾಗಿ ಶಿವಮೊಗ್ಗ ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಅರವಿಂದ್ ಮತ್ತು ಕೆ ಎಸ್ ಪವಿತ್ರಾ ಅವರಿಗೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದನು.ಸದ್ಯ ಆರೋಪಿ ಸೌಹಾರ್ದ ಪಟೇಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಏನಿದು ಘಟನೆ?
ಹೊಸವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ಗಳನ್ನು ಕೋರಿಯರ್ ಮೂಲಕ ಕಳುಹಿಸಲಾಗಿತ್ತು.
ಸ್ವೀಟ್ ಅನ್ನು ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್ಸಿ ಧನಂಜಯ ಸರ್ಜಿ ಅವರು ಸ್ವೀಟ್ ಅನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.