ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಚಿತ್ರಮಂದಿರ ಒಂದದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಒಂದು ಅಗ್ನಿ ದುರಂತದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಬೆಂಕಿ ದುರಂತವು ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಹೃದಯ ಭಾಗದಲ್ಲಿರುವ ಗಣೇಶ್ ಚಿತ್ರಮಂದಿರದಲ್ಲಿ ಸಂಭವಿಸಿದೆ.
ತಡರಾತ್ರಿ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಳಗೆ ದಟ್ಟ ಹೊಗೆ ಹಾಗೂ ಕೆಟ್ಟ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಗಮನಿಸಿದ್ದಾರೆ. ಅಗ್ನಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ, ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹರಿಹರದಿಂದ ಅಗ್ನಿಶಾಮಕದಳದ ಸಿಬ್ಬಂದಿ ಅಗಮಿಸಿ ಅಗ್ನಿ ನಂದಿಸಿದ್ದಾರೆ.
ಇದು ಪಟ್ಟಣದ ಮೊಟ್ಟ ಮೊದಲ ಚಿತ್ರಮಂದಿರ. ಕಲೆಕ್ಷನ್ ಇಲ್ಲದೇ, ಒಟಿಟಿ ಹೊಡೆತದಿಂದ ನಷ್ಟಕ್ಕೆ ಸಿಲುಕಿದ್ದ ಗಣೇಶ್ ಚಿತ್ರಮಂದಿರ ಕೆಲ ಸಮಯದ ಹಿಂದೆ ಮುಚ್ಚಲ್ಪಟ್ಟಿತ್ತು. 60ರ ದಶಕದಿಂದ ಕಾರ್ಯಾರಂಭಿಸಿದ್ದ ಚಿತ್ರಮಂದಿರ, ಕೆಲ ವರ್ಷಗಳಿಂದ ಪ್ರದರ್ಶನ ಸ್ಥಗಿತಗೊಳಿಸಿತ್ತು. ಆದ್ರೀಗ ಕಟ್ಟಡಕ್ಕೆ ಹಾನಿ ಸಂಭವಿಸಿದೆ. ಅವಘಡಕ್ಕೆ ಸ್ಪಷ್ಟ ಕಾರಣ ಹಾಗೂ ನಷ್ಟದ ಅಂದಾಜು ಮೊತ್ತ ತಿಳಿದು ಬಂದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.