ಮಂಗಳೂರು : ಮಸಾಜ್ ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ರಾಮಸೇನಾ ಕರ್ನಾಟಕ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 11 ಮಂದಿಗೆ ಜಾಮೀನು ಸಿಕ್ಕಿದೆ.
ಬಂಧಿತರಿಗೆ ಮಂಗಳೂರು 6ನೇ ಜೆಎಂಎಫ್ ಸಿ ನ್ಯಾಯಾಲಯ ಫೆ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಆರೋಪಿಗಳ ಪರ ವಕೀಲರು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. 14ಮಂದಿ ಆರೋಪಿಗಳಲ್ಲಿ ಜಾಮೀನು ಅರ್ಜಿ ಸಲ್ಲಿಸದ ಮೂರು ಮಂದಿ ಆರೋಪಿಗಳನ್ನು ಹೊರತುಪಡಿಸಿ ನ್ಯಾಯಾಲಯವು 11 ಮಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಹಿನ್ನೆಲೆ?
ಕಳೆದ ಜನೆವರಿ 23 ರಂದು ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕಲರ್ಸ್ ಪಾರ್ಲರ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ ಪೀಠೋಪಕರಣಗಳನ್ನು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ರಾಮಸೇನೆ ಮುಖ್ಯ ಪ್ರಸಾದ್ ಅತ್ತಾವರ್, ಕಾರ್ಯಕರ್ತರಾದಂತಹ ಸಚಿನ್, ಹರ್ಷರಾಜ್, ಮೋಹನ್ ದಾಸ್, ಪುರಂದರ, ರವೀಶ್, ಸುಕೇಶ, ಅಂಕಿತ್, ಕಾಳಿಮುತ್ತು, ಅಭಿಲಾಶ್, ದೀಪಕ್, ವಿಜ್ಞೇಶ್, ಶರಣ್ ರಾಜ್ ಹಾಗೂ ಪ್ರದೀಪ್ ಪೂಜಾರಿಯನ್ನು ಬಂಧಿಸಲಾಗಿತ್ತು.ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕಲರ್ಸ್ ಪಾರ್ಲರ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ಮಾಡಿ ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದರು.