ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ದೆಹಲಿ ಏಮ್ಸ್‌ನಲ್ಲಿ ನಿಧನರಾಗಿದ್ದು, ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ವಹೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸದ್ಯ ಅವರ ಪಾರ್ಥಿವ ಶರೀರವನ್ನು ದೆಹಲಿಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಬಳಿಕ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದ್ದು, ಶುಕ್ರವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಗುರುವಾರ ತಡರಾತ್ರಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ನಾವು ಅಧಿಕೃತವಾಗಿ ಘೋಷಿಸುತ್ತೇವೆ. ಮನಮೋಹನ್ ಸಿಂಗ್ ಅವರ ನಿಧನವು ದೇಶಕ್ಕೆ ದುರಂತದ ನಷ್ಟ ಎಂದು ಬಣ್ಣಿಸಿದ ಅವರು, ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮತ್ತು ದೇಶದ ನಿಜವಾದ ಸಂಕೇತ ಎಂದು ಹೇಳಿದರು.