ರಾಯಚೂರು : ಮಂಗನ ಬಾವು ಕಾಯಿಲೆ ಕೇವಲ ಉತ್ತರ ಕನ್ನಡ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಮಾತ್ರ ಪ್ರಕರಣಗಳು ಇವೆ ಎಂದು ಹೇಳಲಾಗಿತ್ತು, ಆದರೆ ಇದೀಗ ಈ ಒಂದು ಮಂಗನ ಬಾವು ಕಾಯಿಲೆ ರಾಯಚೂರಿಗೂ ಕಾಲಿಟ್ಟಿದ್ದು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನೀರಲಕೇರಿ ಗ್ರಾಮದ ಸರ್ಕಾರಿ ಶಾಲೆಯ ಸುಮಾರು 150ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿ, ಇಡೀ ಶಾಲೆಯನ್ನು ಆವರಿಸಿದೆ. ಗಂಟಲು ಭಾಗದಲ್ಲಿ ಬಾವು, ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ಬಳಲುತ್ತಿದ್ದಾರೆ. ಬಾವು ಇರುವ ಕಡೆ ಅರಿಶಿಣ ಮತ್ತು ಪಟ್ಟಿ ಹಾಕಿ ಪೋಷಕರು ಮನೆ ಮದ್ದು ನೀಡುತ್ತಿದ್ದಾರೆ. ಮಂಗನ ಬಾವು ಕಾಯಿಲೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ.
ಸದ್ಯ ಭಾದಿತರಿಗೆ ಆನೆಹೊಸರು, ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರ ತಿಳಿದು ಗ್ರಾಮದಲ್ಲಿ ಮುಕ್ಕಾಂ ಹೂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ಪೋಷಕರು ಹೆದರುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಬೇಸಿಗೆಯ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಖಾಯಿಲೆ ಬರುತ್ತದೆ. ಮೂರು-ನಾಲ್ಕು ದಿನಗಳಲ್ಲಿ ಬಾವು ವಾಸಿಯಾಗತ್ತೆ. ಸದ್ಯ ಶಾಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.