ಧಾರವಾಡ : ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ದುಷ್ಕರ್ಮಿಗಳು, ಮನೆಗೆ ನುಗ್ಗಿ ವ್ಯಕ್ತಿ ಒಬ್ಬರನ್ನು ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಕೊಚ್ಚಿ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಕೊಲೆ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಗಿರೀಶ್ ಕರಡಿಗುಡ್ಡ (50) ಎಂದು ತಿಳಿದುಬಂದಿದೆ. ಗಿರೀಶ್ ಅವರು ರಿಯಲ್ ಎಸ್ಟೇಟ್ ನಡೆಸುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಇದನ್ನು ಮನಗಂಡು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಇರಿದು, ಕೊಚ್ಚಿ ಕೊಲೆ ಮಾಡಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಗಳು ಶಾಲೆಯಿಂದ ಬಂದು ಕದ ತೆಗೆದಾಗಲೇ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗಿರೀಶ ಗರಗ ಪೊಲೀಸ್ ಠಾಣೆ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿದ್ದ, ತನ್ನದೇ ಗ್ರಾಮದಲ್ಲಿ ಹೊಸ ಮನೆ ಸಹ ಕಟ್ಟಿಸುತ್ತಿದ್ದರು. ಊರ ಹೊರಗೆ ಈ ಮನೆ ಇದ್ದು, ಮನೆ ಪಕ್ಕದಲ್ಲೇ ಮಾವಿನ ತೋಟವಿದೆ. ಹಂತಕರು, ಕೊಲೆ ಮಾಡಿದ ಬಳಿಕ ಮನೆಯ ಹಿಂಬದಿಯಿಂದ ಮಾವಿನ ತೋಟಕ್ಕೆ ಜಿಗಿದು ಪರಾರಿಯಾಗಿರುವ ಸಾಧ್ಯತೆ ಇದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.