ಉತ್ತರಕನ್ನಡ : ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದೀಗ ಕಳೆದ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಡೂರಿನಲ್ಲಿ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಅನಿಲ್ ರಾಘೋಬ ಪೆಡ್ನೇಕರ್(65) ಎಂದು ತಿಳಿದುಬಂದಿದೆ.ಅನಿಲ್ ಅವರು ಜುಲೈ 17ರಂದು ಇಡೂರು ಪ್ರಾಥಮಿಕ ಶಾಲೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ತೆರಳಿದ್ದರು. ಊರಿನಲ್ಲಿ ನೀರು ತುಂಬಿದ್ದರಿಂದ ಗೋವುಗಳ ರಕ್ಷಣೆಗೆ ಅನಿಲ್ ರಾಘೋಬ ಪೆಡ್ನೇಕರ್ ತೆರೆಳಿದ್ದರು. ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನ ಊಟ ಮುಗಿಸಿ ಮನೆಯಲ್ಲಿದ್ದ ದನಕರುಗಳನ್ನು ಬಿಡಲು ತೆರಳಿದ್ದರು.
ಹಸುಗಳನ್ನು ರಕ್ಷಣೆ ಮಾಡಿ ಹಿಂತಿರುಗುವಾಗ ನೀರಿನ ಸೆಳೆತಕ್ಕೆ ಅನಿಲ್ ಕೊಚ್ಚಿ ಹೋಗಿದ್ದರು. ಈ ಬಗ್ಗೆ ನಿನ್ನೆ ಸಂಜೆ ಅನಿಲ್ ಕುಟುಂಬಸ್ಥರು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಅನಿಲ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.