ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೊಬ್ಬ ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಲಿಂಗರಾಜಪುರದ ಮನೆಯೊಂದರಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಕಂಪನಿ ಉದ್ಯೋಗಿ ಸತೀಶ್ ಕುಮಾರ್ (25) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸತೀಶ್ ಕುಮಾರ್ ತಾಯಿ ಸಂಗೀತಾ ಗುರುವಾರ ರಾತ್ರಿ 10.30ಕ್ಕೆ ಆತನ ರೂಮ್ ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸತೀಶ್ ಪದವಿ ಓದುತ್ತಿದ್ದಾಗ ತನ್ನ ಸಹಪಾಠಿಇ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ 2 ವರ್ಷಗಳಿಂದ ಇಬ್ಬರೂ ಬೆಳ್ಳಂದೂರಿನ ಸ್ಟಾರ್ಟಪ್ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಯುವತಿ ಸತೀಶ್ ನಿಂದ ದೂರವಾಗಿದ್ದಳು ಎನ್ನಲಾಗಿದೆ.
ಈ ನಡುವೆ ಹೊಸ ವರ್ಷಕ್ಕೆ ಶುಭ ಕೋರಲು ಸತೀಶ್ ಕರೆ ಮಾಡಿದ್ದು, ಆಕೆ ಕರೆ ಪ್ರತಿಕ್ರಿಯಿಸಿಲಿಲ್ಲ ಎಂಬ ಕಾರಣಕ್ಕೆ ಮನನೊಂದು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.