ದಕ್ಷಿಣಕನ್ನಡ : ಇತ್ತೀಚೆಗೆ ಈ ಒಂದು ಸಾಮಾಜಿಕ ಜಾಲತಾಣದಲ್ಲಿ ಯುವಜನತೆ ಮುಳುಗಿದ್ದು, ಸ್ನೇಹ ಪ್ರೀತಿ ಪ್ರೇಮ ಅಂತ ತಮ್ಮ ಮುಂದಿನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವಕನೊಬ್ಬ ಇನ್ಸ್ಟಾಗ್ರಾಮ್ ನಲ್ಲಿ ಬೇರೆ ಹುಡುಗಿಯ ಫೋಟೋ ಲೈಕ್ ಮಾಡಿದ್ದಕ್ಕೆ, ಸಹಿಸದ ಆತನ ಪ್ರೇಯಸಿ ಆತನಿಗೆ ತರಾಟೆ ತೆಗೆದುಕೊಂಡಿದ್ದಾಳೆ. ಇದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಹೌದು ಆತ್ಮಹತ್ಯೆ ಮಾಡಿಕೊಂದ ಯುವಕನನ್ನು ಜಿಲ್ಲೆಯ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆ ಕುಕ್ಕಿಪ್ಪಾಡಿಯ ಚೇತನ್ (25) ಎಂದು ತಿಳಿದುಬಂದಿದೆ.ಮೃತ ಚೇತನ್ಗೆ ಕುಂದಾಪುರದ ಚೈತನ್ಯ ಎಂಬ ಯುವತಿಯು ಇನ್ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದಳು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿತ್ತು.
ಕಳೆದ 8 ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥವಾಗಿತ್ತು. ಜನವರಿ 21 ರಂದು ಚೇತನ್ ತನ್ನ ಪರಿಚಯದ ಬೇರೊಂದು ಯುವತಿಯ ಫೋಟೋಗೆ ಇನ್ಸ್ಟಾಗ್ರಾಮ್ನಲ್ಲಿ ಲೈಕ್ ಕೊಟ್ಟಿದ್ದನು. ಇದನ್ನು ಪ್ರಶ್ನಿಸಲು ಚೈತನ್ಯ ಭಾವಿ ಪತಿ ಚೇತನ್ ಮನೆಗೆ ಬಂದಿದ್ದರು. ಈ ವೇಳೆ ಚೇತನ್ ಮನೆಯಲ್ಲಿ ಒಬ್ಬರೇ ಇದ್ದರು. ಯುವತಿಯ ಫೋಟೋಗೆ ಲೈಕ್ ನೀಡಿದ್ದಕ್ಕೆ ಚೇತನ್ನನ್ನು ಚೈತನ್ಯ ತರಾಟೆಗೆ ತೆಗೆದುಕೊಂಡಿದ್ದಳು.
ಇದರಿಂದ ಮನನೊಂದ ಯುವಕ ತನ್ನ ಪ್ರೇಯಸಿ ಮನೆಯಲ್ಲಿರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಆಕೆ ಚೇತನ್ ತಾಯಿಗೆ ಕರೆ ಮಾಡಿ ನಿಮ್ಮ ಮಗ ಮಲಗಿದ್ದವನು ಏಳುತ್ತಿಲ್ಲ ಎಂದು ತಿಳಿಸಿದ್ದಾಳೆ.ತಕ್ಷಣ ಚೇತನ್ ತಾಯಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.