ಬೆಂಗಳೂರು : ಬೆಂಗಳೂರಿನ ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಸಿಕ್ಕಿದ್ದು ಈ ಒಂದು ಕೊಲೆಯು ಕೇವಲ ಒಬ್ಬನಿಂದ ನಡೆದಿಲ್ಲ. ಇದರ ಹಿಂದೆ ಹಲವರ ಪಾತ್ರ ಇದೆ ಎಂದು ಪೊಲೀಸರ ಪರಿಶೀಲನೆ ವೇಳೆ ತಿಳಿದುಬಂದಿದೆ.
ಹೌದು ವೈಯ್ಯಾಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಸುಮಾರು 50 ತುಂಡುಗಳಾಗಿ ಮೃತದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸಲಾಗಿತ್ತು. ಕೊಲೆಯ ಹಿಂದೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಇದೀಗ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಬಹಿರಂಗವಾಗಿದೆ.
ಮಹಾಲಕ್ಷ್ಮಿ ಕೊಲೆಯಾದ ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುವ ವೇಳೆ ಹಲವರ ಫಿಂಗರ್ ಪ್ರಿಂಟ್ ಇದೀಗ ಲಭ್ಯವಾಗಿದೆ. ಹಾಗಾಗಿ ಈ ಒಂದು ಕೊಲೆಯ ಹಿಂದೆ ಕೇವಲ ಒಬ್ಬ ವ್ಯಕ್ತಿಯದಲ್ಲದೆ ಹಲವು ವ್ಯಕ್ತಿಗಳ ಪಾತ್ರ ಇರುವುದು ತನಿಖೆಯ ವೇಳೆ ತಿಳಿದು ಬಂದಿದೆ.ಈಗಾಗಲೇ ಜಾರ್ಖಂಡ್ ಮೂಲದ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ. ಜೊತೆಗೆ ಇನ್ಯಾರ ಪಾತ್ರ ಇದೆ ಮತ್ತು ಯಾವ ಆಯುಧದಲ್ಲಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಅಶ್ರಫ್ ಎಂಬಾತನ ಮೇಲೆ ಮಹಾಲಕ್ಷ್ಮಿ ಪತಿ ಹೇಮಂತ್ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಯಲ್ಲಿ ಈತನ ಪಾತ್ರ ಇಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಪೊಲೀಸರಿಗೆ ಮನೆಯಲ್ಲಿ ಮಹಾಲಕ್ಷ್ಮಿ ಮೊಬೈಲ್ ಸಿಕ್ಕಿದ್ದು, ಪೊಲೀಸರು ಈ ಮೊಬೈಲ್ ನಲ್ಲಿ ಇರುವ ಸಾಕ್ಷಿಗಳ ಪರಿಶೀಲನೆ ನಡೆಸ್ತಿದ್ದಾರೆ.