ಮಹಾರಾಷ್ಟ್ರ : ಕರ್ನಾಟಕದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತನ್ನ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 9:10 ರ ಸುಮಾರಿಗೆ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಕನ್ನಡ ಪರ ಕಾರ್ಯಕರ್ತರು ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದು ಹಲ್ಲೆ ನಡೆಸಿದ್ದಾರೆ ಎಂದು ಸರ್ನಾಯಕ್ ಹೇಳಿದರು. ಈ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವವರೆಗೆ ಸೇವೆಗಳು ಪುನರಾರಂಭಗೊಳ್ಳುವುದಿಲ್ಲ ಎಂದು ಸರ್ನಾಯಕ್ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿ ಬಳಿ ಮರಾಠಿಯಲ್ಲಿ ಹುಡುಗಿಗೆ ಉತ್ತರಿಸದ ಕಾರಣ ಕರ್ನಾಟಕ ಸಾರಿಗೆ ಬಸ್ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಮೇಲೆ ಹಲ್ಲೆ ನಡೆಸಲಾಗಿತ್ತು. ಸುಲೇಭಾವಿ ಗ್ರಾಮದಲ್ಲಿ ಬಸ್ ಹತ್ತಿದ ಹುಡುಗಿಯೊಬ್ಬಳು ಮರಾಠಿಯಲ್ಲಿ ಮಾತನಾಡುತ್ತಿದ್ದಳು, ಮತ್ತು ಕನ್ನಡದಲ್ಲಿ ಮಾತನಾಡಲು ಕೇಳಿದಾಗ ಅವಳು ತನ್ನನ್ನು ನಿಂದಿಸುತ್ತಿದ್ದಳು ಎಂದು 51 ವರ್ಷದ ಕಂಡಕ್ಟರ್ ಕಣ್ಣೀರು ಸುರಿಸುತ್ತಾ ಹೇಳಿದರು. ಸ್ವಲ್ಪ ಸಮಯದ ನಂತರ, ಒಂದು ಗುಂಪು ಜಮಾಯಿಸಿ ಅವನ ಮೇಲೆ ಹಲ್ಲೆ ಮಾಡಿತು.
ಮಹಾರಾಷ್ಟ್ರ ಸಾರಿಗೆ ಸಚಿವರು ಹೇಳಿದ್ದೇನು?
ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರ ನಿರ್ದೇಶನದಂತೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ನೌಕರರ ಸುರಕ್ಷತೆಯ ದೃಷ್ಟಿಯಿಂದ ಕೊಲ್ಹಾಪುರದಿಂದ ಕರ್ನಾಟಕಕ್ಕೆ ಹೋಗುವ ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳ ಸಂಚಾರವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಲಾಗಿದೆ ಎಂದು ಎಂಎಸ್‌ಆರ್‌ಟಿಸಿ ವಕ್ತಾರ ಅಭಿಜಿತ್ ಭೋಸಲೆ ತಿಳಿಸಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಮರಾಠಿಗರ ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದುರ್ಗದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಐಮಂಗಲ ಟೋಲ್ ಬಳಿ ಮಹಾರಾಷ್ಟ್ರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಮೂಲದ ಬಸ್ ಮತ್ತು ಚಾಲಕನ ಮೇಲೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಇದೇ ಘಟನೆಯಿಂದ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ತನ್ನ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.