ಕಲಬುರಗಿ: ಕಾಳಸಂತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲು ನೆರವು ನೀಡುವ ಆರೋಪದ ಮೇಲೆ, ಪಿಎಸ್ಐ ಮತ್ತು ಹೆಡ್ ಕಾನ್ಸ್ಟೇಬಲ್ ಇಬ್ಬರು ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕಲಬುರಗಿ ಜಿಲೆಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಎಡ್ರಾಮಿ ಪೊಲೀಸ್ ಠಾಣೆಯ ಪಿಎಸ್ ಐ ವಿಶ್ವನಾಥ್ ಮುದ್ದರೆಡ್ಡಿ ಹಾಗೂ ಹೆಡ್ ಕಾನ್ಸ್ಟೇಬಲ್ ಸಿದ್ದಣ್ಣ ಬಿರಾದಾರ್ ಲೋಕಾಯುಕ್ತ ದಾಳಿಯಲ್ಲಿ ಬಂಧನಕ್ಕೊಳಗಾದ ಅಧಿಕಾರಿಗಳಾಗಿದ್ದಾರೆ.
ಪ್ರಕರಣದ ಹಿನ್ನೆಲೆ
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನುಬಾಹಿರವಾಗಿ ಸಾಗಿಸಲು ಅನುಕೂಲ ಮಾಡಿಕೊಡಲು ಪಿಎಸ್ ಐ ವಿಶ್ವನಾಥ್ ಅವರು ಆನಂದ್ ಕುಸ್ತಿ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಅಕ್ರಮ ನೆರವಿಗಾಗಿ ಬರೋಬ್ಬರಿ ₹50,000 ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ ಮುರುಗುಂಡಿ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ, ₹50,000 ನಗದು ಹಣದೊಂದಿಗೆ ಪಿಎಸ್ ಐ ವಿಶ್ವನಾಥ್ ಮತ್ತು ಹೆಡ್ ಕಾನ್ಸ್ಟೇಬಲ್ ಸಿದ್ದಣ್ಣ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದು ಬಂಧಿಸಲಾಗಿದೆ.








