ಬೆಂಗಳೂರು : ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಸಾರ್ವಜನಿಕರ ಯಾವುದೇ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎನ್ನುವುದು ತಿಳಿದಿರುವ ಸಂಗತಿ. ಆದರೆ ಇದೀಗ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲೂ ಕೂಡ ಅಲ್ಲಿನ ಕೆಲ ಡಿ ಗ್ರೂಪ್ ಸಿಬ್ಬಂದಿಗಳು ಸೇರಿದಂತೆ ಹಲವರು ರೋಗಿಗಳ ಸಂಬಂಧಿಕರ ಬಳಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎನ್ನುವ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ.
ಹೌದು ಕೆ ಸಿ ಜನರಲ್ ಆಸ್ಪತ್ರೆಯ ವಿರುದ್ಧ ಲೋಕಾಯುಕ್ತಕ್ಕೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಇದೀಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಕೆ ಸಿ ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಹೆರಿಗೆ ವಾರ್ಡ್ ನಲ್ಲಿ ಇದ್ದಂತಹ ಮಂಜುಳಾ ಎಂಬ ಮಹಿಳೆಯೊಬ್ಬರು ಕಳೆದ ತಿಂಗಳು ನಮ್ಮ ಮಗಳನ್ನು ಹೆರಿಗೆಗೆ ಅಂತ ಕರೆದುಕೊಂಡು ಬಂದಿದ್ದೇವೆ. ಆದರೆ ಇಲ್ಲಿನ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ತಾಯಿ ಕಾರ್ಡನ್ನೇ ಕಿತ್ತು ಇಟ್ಕೋತಾರೆ. ಕನಿಷ್ಠ ಎಂದರು 500 ರೂಪಾಯಿ ಆದರೂ ಕೊಡಿ ಎಂದು ಕೇಳುತ್ತಾರೆ. ಇಷ್ಟೇ ಹಣ ಕೊಡಬೇಕು ಅಂತ ಡಿಮ್ಯಾಂಡ್ ಮಾಡುತ್ತಾರೆ ಎಂದು ಮಂಜುಳಾ ಲೋಕಾಯುಕ್ತ ಅಧಿಕಾರಿಗೆ ದೂರು ನೀಡಿದರು.