ಮೈಸೂರು : ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದೆ. ಲೋಕಾಯುಕ್ತ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿರೋ ದೂರುದಾರ ಸ್ನೇಹಮಯಿ ಕೃಷ್ಣ, ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಈ ಹಗರಣದಲ್ಲಿ ಇಡಿ ಪ್ರವೇಶ ಮಾಡಿದ್ದು, ತನಿಖೆ ನಡೆಸಿದೆ. ಇದರ ಮಧ್ಯ ಇದೀಗ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸ್ನೇಹಮಯಿಕೃಷ್ಣ ದೂರು ನೀಡಿದ್ದಾರೆ.
ಹೌದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ಜಿಟಿ ದೇವೇಗೌಡ ಮಹೇಂದ್ರ ಹೆಸರಿನಲ್ಲಿ ಬೇನಾಮಿಯಾಗಿ ಪರಿಹಾರ ಪಡೆಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹೋದರಿ ಪುತ್ರ ಮಹೇಂದ್ರ, ದೇವನೂರು ಸರ್ವೇ ನಂಬರ್ 81/2 ರಲ್ಲಿ 2.22 ಎಕರೆ ಜಮೀನನ್ನು ಖರೀದಿಸಿದ್ದಾರೆ.ಬಳಿಕ ಆ ಜಮೀನಿಗೆ 50:50 ಅನುಪಾತದಲ್ಲಿ ಅಕ್ರಮವಾಗಿ ಪರಿಹಾರ ಪಡೆದ ಆರೋಪ ಕೇಳಿ ಬರುತ್ತಿದೆ. 19 ಸೈಟ್ ಪಡೆದಿರುವ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.