ವರದಿ : ಸುರೇಶ್ ಹಾಸಿಲ್ಕರ್
ಮೈಸೂರು : ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು, ಇಂದು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ಬೆಟ್ಟದ ತಪ್ಪಲಿನಲ್ಲಿರುವ ಚಿರಶಾಂತಿಧಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಇಬ್ಬರು ಪುತ್ರರಾದ ರವಿ ಶಂಕರ್ ಹಾಗು ಉದಯ್ ಶಂಕರ್ ಅಂತಿಮ ವಿಧಿ ವಿಧಾನದ ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಪುತ್ರಿ ಸಹನಾ ವಿಜಯಕುಮಾರ್, ಸಚಿವರಾದ ಡಾ.ಎಚ್ ಸಿ ಮಹದೇವಪ್ಪ. ವೆಂಕಟೇಶ್. ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
ನಿನ್ನೆ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಗಿದ್ದು, ಮೈಸೂರಿನ ಕಲಾಮಂದಿರದ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಜೆಎಸ್‌ಎಸ್ ಆಸ್ಪತ್ರೆಗೆ ಪಾರ್ಥಿವ ಶರೀರ ರವಾನಿಸಲಾಗಿತ್ತು. ಇಂದು ಬೆಳಗ್ಗೆ 8:30 ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಸಿ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಎಸ್.ಎಲ್ ಭೈರಪ್ಪ ಅವರ ಕುರಿತು…!
ಎಸ್.ಎಲ್ ಭೈರಪ್ಪ ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದಲ್ಲಿ ಜನಿಸಿದರು. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂಬುದು ಎಸ್.ಎಲ್. ಬೈರಪ್ಪ ಅವರ ಪೂರ್ಣ ಹೆಸರು. ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಭೈರಪ್ಪ ಅವರು ಜನಿಸುತ್ತಾರೆ. ಎಸ್ ಎಲ್ ಭೈರಪ್ಪ ಪ್ರಸಿದ್ಧ ಕಾದಂಬರಿಕಾರ ತತ್ವಜ್ಞಾನಿ ಲೇಖಕರಾಗಿದ್ದರು. 1958 ರಲ್ಲಿ ಎಂ ಎ ಫಿಲಾಸಫಿ ಪಡೆದಿದ್ದರು.1963 ರಲ್ಲಿ ಕ್ಷೇತ್ರದಲ್ಲಿ ಪಿಎಚ್ ಡಿ ಮಾಡಿದ್ದರು.
ಭೈರಪ್ಪ ಅವರ ಕೃತಿಗಳು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯವಾಗಿವೆ ಮತ್ತು ಅವರನ್ನು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. 2023ರಲ್ಲಿ ಎಸ್‌ಎಲ್ ಭೈರಪ್ಪ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ತಮ್ಮ ಸ್ವಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಕೂಡ ಶ್ರಮಿಸಿದ್ದರು. ಬಾಲ್ಯದಲ್ಲಿ ಕಷ್ಟದಲ್ಲೇ ಬೆಳೆದು ವಿದ್ಯಾಭ್ಯಾಸ ಮಾಡಿದ್ದರು. ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದರು. ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಓದುಗ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದ್ರೆ, ಜ್ಞಾನಪೀಠ ಪ್ರಶಸ್ತಿಗೆ ಪರ್ಯಾಯವಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಭೈರಪ್ಪ ಅವರಿಗೆ ಬಂದಿತ್ತು.
ತತ್ವಶಾಸ್ತ್ರ, ಇತಿಹಾಸ, ವಿದ್ಯಾಭ್ಯಾಸ ಸಂಸ್ಕೃತಿ, ಮಾನವೀಯ ಸಂವೇದನೆಗೆ ಸಂಬಂಧಿಸಿದ ಬರಹಗಳಿಗೆ ಹೆಸರುವಾಸಿಯಾಗಿದ್ದರು. ಭೈರಪ್ಪ ಅವರು ಕಾದಂಬರಿಗಳಲ್ಲದೆ ಸೌಂದರ್ಯಮೀಮಾಂಸೆ, ತತ್ವಶಾಸ್ತ್ರದ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಮುಖ ಕೃತಿಗಳೆಂದರೇ, ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು, ಮತದಾನ ಮುಂತಾದವು ಅವರ ಕಾದಂಬರಿಗಳಾಗಿವೆ.
ಹೆಗಲ ಮೇಲೆ ತಮ್ಮನ ಶವ ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದ ಎಸ್.ಎಲ್ ಭೈರಪ್ಪ..!
ಎಸ್.ಎಲ್ ಭೈರಪ್ಪ ಅವರ ಬಾಲ್ಯದ ಕುರಿತು ಹೇಳಬೇಕೆಂದರೆ ಅವರ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗಿನ ಕಾಲದಲ್ಲಿ ಭೈರಪ್ಪನವರು ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್ ಬಲಿಯಾಗಿದ್ದರು. ಅವರ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅವರ ಅಣ್ಣ, ಅಕ್ಕ ಪ್ಲೇಗ್ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು.
ತಾಯಿ ಮೃತಪಟ್ಟು 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್ ಬಂದಿತ್ತು. ಆದರೆ ನನು ಹೇಗೂ ಪಾರಾಗಿದ್ದೆ ಎಂದು ಹೇಳಿದ್ದರು.ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ ಇವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು.
ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಷ್ಟವಾಗಿದ್ದವು. ಆತನ ಬೈಗುಳಗಳಿಂದ ನಾನು ಹೆದರಿ ಹೋಗಿದ್ದೆ ಎಂದು ತಮ್ಮ ಆತ್ಮಚರಿತ್ರೆ ʼಭಿತ್ತಿʼಯಲ್ಲಿ ಬರೆದಿದ್ದಾರೆ. ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಬಂದಿದ್ದರು.
ಭೈರಪ್ಪ ಅವರ ಕಾದಂಬರಿಗಳು
ಭೀಮಕಾಯ(1952), ಬೆಳಕು ಮೂಡಿತು(1959), ಧರ್ಮಶ್ರೀ – (1961), ದೂರ ಸರಿದರು(1967), ಮತದಾನ (1965), ವಂಶವೃಕ್ಷ(1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ(1968), ಗೃಹಭಂಗ(1970), ನಿರಾಕರಣ-(1971), ಗ್ರಹಣ-(1972), ದಾಟು (1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ (1986) ಅಂಚು-(1990), ತಂತು (1993), ಸಾರ್ಥ(1998), ಮಂದ್ರ(2001), ಆವರಣ(2007), ಕವಲು (2010), ಯಾನ (2014) ಉತ್ತರಕಾಂಡ-(2017).
ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ
ಬೈರಪ್ಪ ಅವರಿಗೆ ಬಂದ ಪದವಿಗಳು ಮತ್ತು ಪ್ರಶಸ್ತಿಗಳು ಅಂದರೇ, ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ವಿಶೇಷತೆ ಅಂದರೆ, ಭೈರಪ್ಪನವರ ಕಾದಂಬರಿಗಳು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅನೇಕ ಸಾರ್ವಜನಿಕ ಚರ್ಚೆಗಳಿಗೆ ಕಾರಣವಾಗಿವೆ.
ರಾಷ್ಟ್ರೀಯ ಪ್ರಶಸ್ತಿಗಳು :
ಪದ್ಮಭೂಷಣ ಪ್ರಶಸ್ತಿ (2023), ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ (2016), ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015), ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು (National Research Professor), ಸರಸ್ವತಿ ಸಮ್ಮಾನ್ (2011), ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)
ರಾಜ್ಯ ಪ್ರಶಸ್ತಿಗಳು :
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2020), ನೃಪತುಂಗ ಪ್ರಶಸ್ತಿ (2017), ಶ್ರೀ ಕೃಷ್ಣದೇವರಾಯ ಪ್ರಶಸ್ತಿ (2017), ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2015), ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014), ವಾಗ್ವಿಲಾಸಿನಿ ಪುರಸ್ಕಾರ (2012), ನಾಡೋಜ ಪ್ರಶಸ್ತಿ (2011), ಎನ್‌ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2007), ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (2007), ಪಂಪ ಪ್ರಶಸ್ತಿ (2005), ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966).