ತುಮಕೂರು : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ರಿಪೇರಿ ಮಾಡುವಾಗ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಒಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ರಾಗಿಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಲೈನ್ಮ್ಯಾನ್ ಅನ್ನು ದುರ್ಗಪ್ರಸನ್ನ (29) ಎಂದು ಹೇಳಲಾಗುತ್ತಿದೆ. ರಾಗಿಮುದ್ದೇನಹಳ್ಳಿಗೆ ಭೇಟಿ ನೀಡಿ ದುರಸ್ತಿ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.
ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ವೇಳೆ ದುರ್ಗಾ ಪ್ರಸನ್ನ ಗ್ರಾಮಕ್ಕೆ ಭೇಟಿ ನೀಡಿ ರಿಪೇರಿ ಮಾಡುತ್ತಿದ್ದರು. ಕೂಡಲೇ ಅವರಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ಇದಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.