ಚಾಮರಾಜನಗರ : ಮಾದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್ ಆಗಿ ಚಾಲಕ ಬಸ್ ಅನ್ನು ರಸ್ತೆಯ ಡಿವೈಡರ್ ಮೇಲೆ ಹತ್ತಿಸಿರುವ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಳೆ ಮಹದೇಶ್ವರ ಬೆಟ್ಟ ದಿಂದ ಕೆಎಸ್ಆರ್ಟಿಸಿ ಬಸ್ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಬಸ್ ನಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು.
ಅಕಸ್ಮಾತ್ ಡಿವೈಡರ್ ಅನ್ನು ಚಾಲಕ ಹತ್ತಿಸದಿದ್ದರೆ ಬಸ್ ಕಂದಕಕ್ಕೆ ಬೀಳುವ ಸಾಧ್ಯತೆ ಇತ್ತು. ಹಾಗಾಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಇದೀಗ 60 ಜನ ಪ್ರಯಾಣಿಕರ ಜೀವ ಉಳಿದಿದ್ದು, ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಕಂಡಕ್ಟರ್ ಪ್ರಯಾಣಿಕರನ್ನು ಬೇರೆ ಬಸ್ ನಲ್ಲಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.